ಕೋಲಾರ : ಎಲ್ಲೋ ಹುಟ್ಟಿ, ಎಲ್ಲೋ ಬೆಳೆದು, ಕೋಲಾರಕ್ಕೆ ಬಂದು ಸಾವಿರಾರು ಕೋಟಿ ರೂ. ಬಂಡವಾಳ ಹೂಡಿರುವ ವಿಸ್ಟ್ರಾನ್ ಕಂಪನಿಯ ಮೇಲೆ ಕಾರ್ಮಿಕರು ಏಕಾಏಕಿ ನಡೆಸಿರುವ ದಾಂಧಲೆಯನ್ನು ನಾನು ಒಪ್ಪಿಕೊಳ್ಳುವುದಿಲ್ಲ ಎಂದು ಮಾಜಿ ಸಚಿವ ವರ್ತೂರ್ ಪ್ರಕಾಶ್ ಹೇಳಿದ್ದಾರೆ.
ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಳೆದ ಎರಡು ವರ್ಷದ ಹಿಂದೆ ವಿಸ್ಟ್ರಾನ್ ಕಂಪನಿಯು ಜಿಲ್ಲೆಗೆ ಆಗಮಿಸಿದ್ದಾಗ ಬಹಳ ಖುಷಿಯಾಗಿತ್ತು. ಆದರೆ, ಇತ್ತೀಚೆಗೆ ನಡೆದ ವಿಧ್ವಂಸಕ ಕೃತ್ಯದಿಂದ ತಮಗೆ ನೋವಾಗಿದೆ ಎಂದು ಕಾರ್ಮಿಕರ ದಾಂಧಲೆ ಖಂಡಿಸಿದರು.
ವಿಸ್ಟ್ರಾನ್ ಕಂಪನಿಗೆ ಜಮೀನು ಮಂಜೂರಾದಾಗ ನಮಗೂ ತುಂಬಾ ಸಂತೋಷವಾಗಿತ್ತು. ಕಂಪನಿಯವರು ನನ್ನಲ್ಲಿ ಬಂದು ಬೆಂಬಲಿಸುವಂತೆ ಮನವಿ ಮಾಡಿಕೊಂಡಿದ್ದರು. ಹಾಗಾಗಿ, ಕೈಲಾದಷ್ಟು ಸಹಕಾರ ನೀಡಿದ್ದೆ. ಉದ್ಯೋಗಿಗಳನ್ನು ತೆಗೆದುಕೊಳ್ಳುವ ವಿಚಾರದಲ್ಲಿ ನಾನು ತಲೆ ಹಾಕಿರಲಿಲ್ಲ.
ಇದನ್ನೂ ಓದಿ : ವಿಸ್ಟ್ರಾನ್ ಕಂಪನಿಯಲ್ಲಿ ದಾಂಧಲೆ: ನೂರಾರು ಕೋಟಿ ರೂಪಾಯಿ ನಷ್ಟ, 11,500 ಕಾರ್ಮಿಕರು ಬೀದಿ ಪಾಲು
ಆದರೆ, ಕಂಪನಿಯಲ್ಲಿ ಇಂತಹ ದಾಂಧಲೆ ನಡೆಯಬಾರದಿತ್ತು. ಇದರಿಂದ ಆರ್ಥಿಕ ದೃಷ್ಟಿಯಿಂದ ಜಿಲ್ಲೆಗೆ ಹಿನ್ನೆಡೆಯಾಗಬಹುದು. ಹಾಗಾಗಿ, ದಾಂಧಲೆಯಲ್ಲಿ ಭಾಗವಹಿಸಿದ ಕಾರ್ಮಿಕರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕೆಂದು ಪೊಲೀಸರಿಗೆ ಸೂಚಿಸಿದರು. ಇದೇ ವೇಳೆ ಅಮಾಯಕರನ್ನು ಬಂಧಿಸದಂತೆ ಮನವಿ ಸಹ ಮಾಡಿದರು.
ಕಂಪನಿಯಲ್ಲಿ ವೇತನ ನೀಡದ ಹಿನ್ನೆಲೆಯಲ್ಲಿ ಡಿ.10ರಂದು ಕಾರ್ಮಿಕರು ದಾಂಧಲೆ ನಡೆಸಿ ಕಂಪನಿಯನ್ನ ಧ್ವಂಸ ಮಾಡಿದ್ದರು. ಈ ಸಂಬಂಧ ಈವರೆಗೆ 149 ಕಾರ್ಮಿಕರನ್ನ ಪೊಲೀಸರು ಬಂಧಿಸಿದ್ದು, ದಾಂಧಲೆಯಿಂದ 437.70 ಕೋಟಿ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.