ಕೋಲಾರ: ಉಜಿರೆಯ ಉದ್ಯಮಿ ಬಿಜೋಯ್ ಅವರ ಪುತ್ರ 8 ವರ್ಷದ ಅನುಭವ್ ಅಪಹರಣ ಸುಖಾಂತ್ಯ ಕಂಡಿದೆ. ಮೂರು ದಿನಗಳಿಂದ ಕಿಡ್ನಾಪರ್ಸ್ ವಶದಲ್ಲಿದ್ದ ಮಗು ಇಂದು ಹೆತ್ತವರ ಮಡಿಲು ಸೇರಿದೆ.
ಅನುಭವ್ನನ್ನು ಡಿಸೆಂಬರ್-17 ರಂದು ನಾಲ್ವರು ಕಿಡ್ನಾಪರ್ಸ್ ಇಂಡಿಕಾ ಕಾರ್ನಲ್ಲಿ ಕಿಡ್ನಾಪ್ ಮಾಡಿದ್ದರು. ಅಪಹರಣಕಾರರು ಹೆತ್ತವರಿಗೆ 17 ಕೋಟಿ ರೂಪಾಯಿ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಈ ಪ್ರಕರಣ ಬೆನ್ನು ಹತ್ತಿದ್ದ ಮಂಗಳೂರು ಪೊಲೀಸರು ಕಳೆದ ರಾತ್ರಿ ಕೂರ್ನಹೊಸಹಳ್ಳಿ ಗ್ರಾಮದಲ್ಲಿ ಮಗುವಿನ ಸಹಿತ ಆರು ಅಪಹರಣಕಾರರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇದನ್ನೂ ಓದಿ : ಬಾಲಕನ ಅಪಹರಣ ಪ್ರಕರಣ ಸುಖಾಂತ್ಯ; ಬಿಗಿದಪ್ಪಿ ಮುದ್ದಾಡಿದ ಪೋಷಕರು
ಮಗು ರಕ್ಷಣೆ ಮಾಡಿದ ಪೊಲೀಸರು ಕಿಡ್ನಾಪ್ ಮಾಡಿದ್ದ ಮೈಸೂರಿನ ಗಂಗಾಧರ್, ಮಂಡ್ಯದ ರಂಜಿತ್, ಹನುಮಂತು ಮತ್ತು ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ಕಮಲ್ ಎಂಬಾತನನ್ನು ಬಂಧಿಸಿದ್ದಾರೆ. ಜೊತೆಗೆ ಕಿಡ್ನಾಪರ್ಸ್ಗೆ ರಕ್ಷಣೆ ನೀಡಿದ್ದ ಕೂರ್ನ ಹೊಸಹಳ್ಳಿ ಗ್ರಾಮದ ಮಂಜುನಾಥ್ ಹಾಗೂ ಮಹೇಶ್ ಎಂಬಾತನನ್ನೂ ಅರೆಸ್ಟ್ ಮಾಡಿದ್ದಾರೆ.
ಡಿಸೆಂಬರ್-17 ರಂದು ಕಿಡ್ನಾಪ್ ಆದ ನಂತರ ಕಿಡ್ನಾಪರ್ಸ್ ಬೆನ್ನು ಹತ್ತಿದ್ದ ಮಂಗಳೂರು ಪೊಲೀಸರ ವಿಶೇಷ ತಂಡ, ಮೊಬೈಲ್ ನೆಟ್ವರ್ಕ್ ಜಾಡು ಹಿಡಿದು ಅವರನ್ನು ಫಾಲೋ ಮಾಡುತ್ತಿತ್ತು. ಹೀಗಿರುವಾಗಲೇ ಕಳೆದ ರಾತ್ರಿ ಅಪಹರಣಕಾರರು ಕೋಲಾರದ ಮಾಸ್ತಿ ಪೊಲೀಸ್ ಠಾಣಾ ವ್ಯಾಪ್ತಿಯ ಕೂರ್ನಹೊಸಳ್ಳಿ ಗ್ರಾಮಕ್ಕೆ ಬಂದಿರುವುದು ಕನ್ಫರ್ಮ್ ಆಗಿತ್ತು. ಈ ವೇಳೆ ಕೋಲಾರ ಎಸ್ಪಿ ಕಾರ್ತಿಕ್ ರೆಡ್ಡಿ ಅವರ ಆದೇಶದ ಮೇರೆಗೆ ಮಾಸ್ತಿ ಪೊಲೀಸ್ ಠಾಣೆಯ ಪಿಎಸ್ಐ ಪ್ರದೀಪ್ ಹಾಗೂ ಅವರ ಸಿಬ್ಬಂದಿ ಇಂದು ಬೆಳಗಿನ ಜಾವ 4 ಗಂಟೆ ಸುಮಾರಿಗೆ ಮಹೇಶ್ ಅವರ ಮನೆಯಲ್ಲಿದ್ದ ಅಪಹರಣಕಾರರನ್ನು ಬಂಧಿಸಿ, ಮಗುವನ್ನು ರಕ್ಷಣೆ ಮಾಡಿದ್ರು. ಈ ವೇಳೆ, ಅವರಿಗೆ ಆಶ್ರಯ ನೀಡಿದ ಮಹೇಶ್ ಹಾಗೂ ಮಂಜುನಾಥ್ ಅವರನ್ನೂ ಬಂಧಿಸಿದರು.
ಇದನ್ನೂ ಓದಿ : ಮಗನನ್ನು ಕಂಡು ತುಂಬಾ ಖುಷಿಯಾಯಿತು: ಬಾಲಕನ ತಂದೆ ಬಿಜೋಯ್
ವಿಷಯ ತಿಳಿದು ಮಂಗಳೂರಿನಿಂದ ಕೋಲಾರದ ಮಾಸ್ತಿ ಗ್ರಾಮಕ್ಕೆ ಆಗಮಿಸಿದ ಮಗುವಿನ ಪೋಷಕರು, ಮಗು ಕಂಡ ತಕ್ಷಣ ಬಿಗಿದಪ್ಪಿಕೊಂಡು ಕಣ್ಣೀರು ಹಾಕಿದರು. ಹೋದ ಜೀವ ಮತ್ತೆ ಬಂದಂತಾಗಿದೆ ಎಂದು ಮಗುವನ್ನು ಮರಳಿ ತಮ್ಮ ಮಡಿಲಿಗೆ ಸೇರಿಸಿದ ಪೊಲೀಸರಿಗೆ ಧನ್ಯವಾದ ಹೇಳಿದ್ರು. ನಾನು ಕೇಳಿದ್ದೆಲ್ಲವನ್ನೂ ಅವರು ಕೊಡಿಸುತ್ತಿದ್ದರು. ಆದ್ರೆ ನಾನು ಏನನ್ನೂ ತಿನ್ನಲಿಲ್ಲ. ಅವರೊಟ್ಟಿಗೆ ಚೆನ್ನಾಗಿಯೇ ಇದ್ದೆ ಎಂದು ಕಿಡ್ನಾಪ್ ಆಗಿದ್ದ ಬಾಲಕ ಅಲ್ಲಿ ನಡೆದ ಘಟನಾವಳಿಗಳನ್ನು ವಿವರಿಸಿದ.
ಅನುಭವ್ ತಂದೆ ಬಿಜೋಯ್ ಬಿಟ್ ಕಾಯಿನ್ ವ್ಯವಹಾರ ಮಾಡುತ್ತಿದ್ದು, ಈ ಹಿನ್ನೆಲೆ ನೂರು ಬಿಟ್ ಕಾಯಿನ್ಸ್ಗೆ ಅಪಹರಣಕಾರರು ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.