ಕೋಲಾರ: ದಂಪತಿಯನ್ನು ಕಟ್ಟಿಹಾಕಿ ನಗ ನಾಣ್ಯ ದೋಚಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಮುಡಿಯನೂರು ಗ್ರಾಮದಲ್ಲಿ ನಿನ್ನೆ ತಡರಾತ್ರಿ ನಡೆದಿದ್ದು, ಗ್ರಾಮದ ಜಯಲಕ್ಷ್ಮಿ, ಮುನಿಯಪ್ಪ ಎಂಬುವರನ್ನು ಕಟ್ಟಿಹಾಕಿ ಮನೆಯಲ್ಲಿದ್ದ ನಾಲ್ಕು ಲಕ್ಷ ರೂ. ನಗದು ಹಾಗೂ 680 ಗ್ರಾಂ ತೂಕದ ಒಡವೆಗಳನ್ನು ದೋಚಿ ಪರಾರಿಯಾಗಿದ್ದಾರೆ. ನಿನ್ನೆ ತಡರಾತ್ರಿ ಪೆಟ್ರೋಲ್ ಕೇಳುವ ನೆಪದಲ್ಲಿ ಮನೆಯ ಬಳಿ ಆಗಮಿಸಿದ ಇಬ್ಬರು ಖದೀಮರು ಮನೆಯಲ್ಲಿದ್ದ ಜಯಲಕ್ಷ್ಮಿ ಮತ್ತು ಮುನಿಯಪ್ಪ ಅವರನ್ನು ಕಟ್ಟಿ ಹಾಕಿ, ಜಯಲಕ್ಷ್ಮಿ ಕತ್ತಿನಲ್ಲಿದ್ದ ಮಾಂಗಲ್ಯ ಸರ, ಉಂಗುರ ಮತ್ತು ಮನೆಯಲ್ಲಿದ್ದ ಚಿನ್ನಾಭರಣವನ್ನು ದೋಚಿ ಕ್ಷಣಾರ್ಧದಲ್ಲಿ ಪರಾರಿಯಾಗಿದ್ದಾರೆ.
ಸ್ಥಳಕ್ಕೆ ಮುಳಬಾಗಿಲು ಗ್ರಾಮಾಂತರ ಠಾಣಾ ಪೊಲೀಸರು ಭೇಟಿ ಪರಿಶೀಲನೆ ನಡೆಸಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ಗ್ರಾಮದಲ್ಲಿ ದರೋಡೆ ಆಗಿರುವುದರಿಂದ ಜನರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.