ಕೋಲಾರ: ಮೇ-14 ರಂದು ಕೆಜಿಎಫ್ನ ಮಾರಿಕುಪ್ಪಂನಲ್ಲಿರುವ ಚಿನ್ನದ ಗಣಿಯಲ್ಲಿ ಕಳ್ಳತನಕ್ಕೆ ಹೋಗಿ, ಸಿಕ್ಕಿಬಿದ್ದಿರುವ ಇಬ್ಬರು ಆರೋಪಿಗಳ ಪೈಕಿ ಒಬ್ಬನಿಗೆ ಕೊರೊನಾ ಸೋಂಕು ಧೃಡವಾಗಿದೆ. ಇದರಿಂದ ಪೊಲೀಸರಲ್ಲಿ ಆತಂಕ ಮನೆಮಾಡಿದೆ.
ಕೆಜಿಎಫ್ನಲ್ಲಿ ಐವರು ಕಳ್ಳತನಕ್ಕೆ ಯತ್ನಿಸಿದ್ದರು. ಈ ವೇಳೆ ನೂರಾರು ಅಡಿಯಲ್ಲಿರುವ ಚಿನ್ನದ ಗಣಿಯ ಗುಂಡಿಯಲ್ಲಿ ಬಿದ್ದು ಮೂವರು ಸಾವನ್ನಪ್ಪಿದ್ದರು. ಇಬ್ಬರು ಬಚಾವ್ ಅಗಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದರು.
ಸೆರೆ ಸಿಕ್ಕ ಇಬ್ಬರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ವೇಳೆ, ನ್ಯಾಯಾಧೀಶರ ಆದೇಶದ ಮೇರೆಗೆ ಒಬ್ಬನನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಿದಾಗ ಆತನಲ್ಲಿ ಸೋಂಕು ದೃಢವಾಗಿದೆ. ಆತನೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿದ್ದ 9 ಜನ ಪೊಲೀಸ್ ಸಿಬ್ಬಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ.
ಅದೃಷ್ಟವಶಾತ್ ಅಂದು ಪೊಲೀಸರು ತೆಗೆದುಕೊಂಡಿದ್ದ ಮುನ್ನೆಚ್ಚರಿಕಾ ಕ್ರಮದಿಂದ ಸಾಕಷ್ಟು ಸಿಬ್ಬಂದಿ ಬಚಾವ್ ಆಗಿದ್ದಾರೆ. ಇಲ್ಲವಾದಲ್ಲಿ ಕೆಜಿಎಫ್ನ ಅರ್ಧ ಪೊಲೀಸರಿಗೆ ಕೊರೊನಾ ಸೋಂಕು ಹರಡುವ ಸಾಧ್ಯತೆ ಇತ್ತು ಎನ್ನಲಾಗ್ತಿದೆ.
ಒಟ್ಟಾರೆ ಕಳ್ಳತನದ ಆರೋಪಿಗಳಿಗೆ ಭಯ ಹುಟ್ಟಿಸುತ್ತಿದ್ದ ಪೊಲೀಸರು, ಇದೀಗ ಕಳ್ಳರನ್ನು ಕಂಡು ಭಯ ಬೀಳುವಂತಾಗಿದೆ.