ಕೋಲಾರ: ವಲಸೆ ಕಾರ್ಮಿಕರು ತಮ್ಮ ತಮ್ಮ ಊರುಗಳಿಗೆ ತೆರಳಲು ಇನ್ನಿಲ್ಲದ ಕಸರತ್ತುಗಳನ್ನ ಮಾಡುತ್ತಿದ್ದಾರೆ. ಈ ಮಧ್ಯೆ ಬೆಂಗಳೂರಿನಲ್ಲಿ ಸಿಕ್ಕಿಹಾಕಿಕೊಂಡಿದ್ದ ವೃದ್ಧನೋರ್ವ ಪಶ್ಚಿಮ ಬಂಗಾಳಕ್ಕೆ ತೆರಳಲು ಸಾಕಷ್ಟು ತೊಂದರೆ ಅನುಭವಿಸಿದ್ದಾನೆ.
ಬಸ್ನಿಂದ ಇಳಿದು ರೈಲು ಬೋಗಿಯ ಬಳಿ ತೆರಳಲು ಪರದಾಡುತ್ತಿದ್ದ ವೃದ್ಧನ ನೆರವಿಗೆ ಧಾವಿಸಿದ ಸ್ವಯಂ ಸೇವಕ ಇಸ್ಮಾಯಿಲ್ ಸಬೀವುಲ್ಲಾ ಎಂಬ ಯುವಕ, ವೃದ್ಧನನ್ನು ಮಗುವಿನಂತೆ ಎತ್ತಿಕೊಂಡು ರೈಲಿಗೆ ಬಿಟ್ಟ ಘಟನೆ ನಿನ್ನೆ ಕೋಲಾರದಲ್ಲಿ ನಡೆದಿದೆ.
ಬೆಂಗಳೂರಿನಿಂದ ಬಿಎಂಟಿಸಿ ಬಸ್ನಲ್ಲಿ ಮಾಲೂರು ರೈಲ್ವೆ ನಿಲ್ದಾಣಕ್ಕೆ ಬಂದಿಳಿದ ವೃದ್ಧನನ್ನು ರೈಲಿನ ಬೋಗಿಗೆ ಹತ್ತಿಸಿ ಯುವಕ ಮಾನವೀಯತೆ ಮೆರೆದಿದ್ದಾನೆ. ಈ ವಿಡಿಯೋ ವೈರಲ್ ಆಗಿದೆ. ಯುವಕನ ಈ ಕಾರ್ಯಕ್ಕೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ.
ಇನ್ನು ಇಂದೂ ಸಹ ಬಿಹಾರ, ಜಾರ್ಖಂಡ್ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳಿಗೆ ಕಾರ್ಮಿಕರು ತೆರಳುತ್ತಿದ್ದು, ಸುಮಾರು 40ಕ್ಕೂ ಹೆಚ್ಚು ಬಿಎಂಟಿಸಿ ಬಸ್ಗಳಲ್ಲಿ ಮಾಲೂರು ರೈಲ್ವೆ ನಿಲ್ದಾಣಕ್ಕೆ ಜನರು ಆಗಮಿಸಿದ್ದಾರೆ. ಇಂದು ಸಂಜೆ 6 ಗಂಟೆ ನಂತರ ಮೂರು ರೈಲುಗಳಲ್ಲಿ ಕಾರ್ಮಿಕರು ಪ್ರಯಾಣ ಬೆಳೆಸಿದ್ದು, ಜಿಲ್ಲಾಡಳಿತ ಕಾರ್ಮಿಕರಿಗೆ ಬೇಕಾದ ಊಟ, ನೀರಿನ ವ್ಯವಸ್ಥೆ ಮಾಡಿದೆ.
ಇನ್ನು ನಿನ್ನೆ ಸರ್ಕಾರ ಕೋಲಾರ ಜಿಲ್ಲೆಯ ಮಾಲೂರು ರೈಲ್ವೆ ನಿಲ್ದಾಣದಿಂದ ಪಶ್ವಿಮ ಬಂಗಾಳಕ್ಕೆ ವಿಶೇಷ ರೈಲಿನ ವ್ಯವಸ್ಥೆ ಮಾಡಿ ಅದರಲ್ಲಿ 1200 ವಲಸೆ ಕಾರ್ಮಿಕರನ್ನ ಕಳುಹಿಸಿಕೊಟ್ಟಿದೆ.