ಕೋಲಾರ: ಇಂಜೆಕ್ಷನ್ ನೀಡಿ ಸೂಜಿಯನ್ನ ಬಾಲಕನ ದೇಹದೊಳಗೆ ಬಿಟ್ಟು ನರ್ಸ್ ಎಡವಟ್ಟು ಮಾಡಿದ ಘಟನೆ ಕೋಲಾರ ಜಿಲ್ಲೆಯ ಕೆಜಿಎಫ್ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ.
ಜ್ವರದಿಂದ ಬಳಲುತ್ತಿದ್ದ 5 ವರ್ಷದ ಅಭಿಲಾಷ್ ಎಂಬ ಬಾಲಕನನ್ನು ಆತನ ಪೋಷಕರು ಚಿಕಿತ್ಸೆಗೆಂದು ಶನಿವಾರ ಸಂಜೆ ಕೆಜಿಎಫ್ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ವೈದ್ಯರ ತಪಾಸಣೆ ಬಳಿಕ ನರ್ಸ್ ಇಂಜೆಕ್ಷನ್ ನೀಡಿದ್ದಾರೆ. ಈ ವೇಳೆ ಇಂಜೆಕ್ಷನ್‍ನ ಸೂಜಿ ಮುರಿದಿದ್ದು, ಅದನ್ನು ನರ್ಸ್ ಬಾಲಕನ ದೇಹದೊಳಗೇ ಬಿಟ್ಟಿದ್ದಾಳೆ. ಆದರೆ ಸೂಜಿ ಕಟ್ ಆದ ಮಾಹಿತಿಯನ್ನೂ ನೀಡದೆ ಸಿಬ್ಬಂದಿ ಹಾಗೂ ವೈದ್ಯರು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಮಗುವಿನ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
![KGF govt hospital](https://etvbharatimages.akamaized.net/etvbharat/prod-images/4882951_216_4882951_1572163305770.png)
ಬಳಿಕ ಸೊಂಟ ನೋವಿನಿಂದ ಒದ್ದಾಡುತ್ತಿದ್ದ ಬಾಲಕನನ್ನು ಸಂಜೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಲ್ಲಿ ಸ್ಕ್ಯಾನಿಂಗ್ ಮಾಡಿದಾಗ ಸತ್ಯ ಬಯಲಾಗಿದ್ದು, ಪೋಷಕರು ಕೆಜಿಎಫ್ ಸರ್ಕಾರಿ ಆಸ್ಪತ್ರೆ ವೈದ್ಯರ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ಸದ್ಯ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಅಭಿಲಾಷ್‍ಗೆ ಚಿಕಿತ್ಸೆ ನೀಡಲಾಗುತ್ತಿದೆ.