ಕೋಲಾರ : "2018ರಲ್ಲಿ ಸಿದ್ದರಾಮಯ್ಯ ನಮಗೆ ಬೇಡ, ಯಡಿಯೂರಪ್ಪ ಬೇಕು ಎಂದು ಜನ ತೀರ್ಮಾನ ಮಾಡಿದ್ರು. ಅದಕ್ಕಾಗಿ ಬಿಜೆಪಿಗೆ ಹೆಚ್ಚಿನ ಸ್ಥಾನಗಳನ್ನು ಕೊಟ್ಟಿದ್ದರು. ಆದ್ರೆ ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯ ಅಸಹಜ ಹೊಂದಾಣಿಕೆ ಮಾಡಿಕೊಂಡು ಸರ್ಕಾರ ಮಾಡಿದ್ರು" ಎಂದು ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಹೇಳಿದರು.
ಕೋಲಾರದ ಕೆಜಿಎಫ್ ನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಬಿಜೆಪಿ ಯುವ ಸಮಾವೇಶಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, "ಈ ಹಿಂದೆ ಕೂಡ ಕರ್ನಾಟಕದ ಜನರು ಬಿಜೆಪಿ ಪರವಾಗಿದ್ರು. ಆದ್ರೆ 2 ಹಾಗೂ 3ನೇ ಸ್ಥಾನದಲ್ಲಿದ್ದ ಪಕ್ಷಗಳು ಸೇರಿ ಸರ್ಕಾರ ಮಾಡಿದ್ರು. ಈ ವೇಳೆ ಕೋವಿಡ್ ಎಲ್ಲೆಡೆ ಹಬ್ಬಿತ್ತು. ಅದನ್ನು ಸಮರ್ಥವಾಗಿ ನಿಭಾಯಿಸಬೇಕೆಂದು ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ ಶಾಸಕರು ಬಿಜೆಪಿಗೆ ಬಂದು ಬೆಂಬಲ ನೀಡಿದ್ರು" ಎಂದರು.
ಬಿಜೆಪಿಗೆ ಮತ ಹಾಕಿ-ಅಣ್ಣಾಮಲೈ: ಯುವಕರನ್ನು ಹುರಿದುಂಬಿಸಿದ ಅಣ್ಣಾಮಲೈ, ಕೆಜಿಎಫ್ ನಲ್ಲಿ ತಮಿಳಿನಲ್ಲಿ ಕೆಲಕಾಲ ಭಾಷಣ ಮಾಡಿದ್ರು. ಕುಮಾರಸ್ವಾಮಿ ಸಿಎಂ ಆಗಿದ್ದಾಗ ಕಿಸಾನ್ ಸಮ್ಮಾನ್ ಯೋಜನೆಯಡಿ 17 ಜನರ ರೈತರ ಹೆಸರನ್ನು ಮಾತ್ರ ಮೋದಿ ಅವರಿಗೆ ಕಳಿಸಿದ್ರು. ಆದರೆ ಯಡಿಯೂರಪ್ಪ ಸಿಎಂ ಆದಾಗ 45 ಲಕ್ಷ ರೈತರ ಹೆಸರುಗಳನ್ನು ಮೋದಿ ಅವರಿಗೆ ಕಳಿಸಿದ್ರು. ಇಲ್ಲಿ ಯಾರು ವ್ಯವಸಾಯ ಮಾಡುತ್ತಿದ್ದೀರೋ ನೀವು ಒಂದು ಮತವನ್ನೂ ಸಹ ಕಾಂಗ್ರೆಸ್, ಜೆಡಿಎಸ್‌ಗೆ ಹಾಕಬಾರದು, ಬಿಜೆಪಿಗೆ ಹಾಕಬೇಕು ಎಂದು ಮನವಿ ಮಾಡಿದ್ರು.
ಬಿಜೆಪಿ ಸಾಧನೆಗಳ ಪಟ್ಟಿ ನೀಡಿದ ಅಣ್ಣಾಮಲೈ: ರಾಜ್ಯದಲ್ಲಿ ಸಂಪೂರ್ಣ ಬಹುಮತದಿಂದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಬೇಕು. ಅದಕ್ಕಾಗಿ ಕೋಲಾರದಲ್ಲಿ 6 ಕ್ಕೆ 6 ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲ್ಲಬೇಕು ಎಂದರು. ಚುನಾವಣೆಯನ್ನು ಫುಟ್ ಬಾಲ್ ಆಟದ ಜರ್ಸಿಗೆ ಹೋಲಿಕೆ ಮಾಡಿದ ಅಣ್ಣಾಮಲೈ, ಆ ಜರ್ಸಿಯಲ್ಲಿ ದೇಶ ಹಾಗೂ ರಾಜ್ಯದ ಹೆಸರು ಎದೆ ಮೇಲೆ ಇರುತ್ತೆ. ಆದ್ರೆ ಜರ್ಸಿ ಹಿಂದೆ ಕ್ರೀಡಾಪಟು ಹೆಸರು ಇರುತ್ತೆ. ಅದೇ ರೀತಿ ಇನ್ನೂ 45 ದಿನ ಪಕ್ಷಕ್ಕಾಗಿ ದುಡಿಯಬೇಕು, ಎಲ್ಲಾ ಸವಾಲು, ಕಷ್ಟಗಳನ್ನ ಕಾಂಗ್ರೆಸ್ 70 ವರ್ಷಗಳಿಂದ ಹಾಗೆ ಉಳಿಸಿಕೊಂಡು ಬಂದಿದೆ ಎಂದು ಹಲವು ಯೋಜನೆಗಳನ್ನ ಬಿಜೆಪಿ ಸರ್ಕಾರ ಮಾಡಿದೆ ಎಂದು ಹೇಳುವ ಮೂಲಕ ಬಿಜೆಪಿ ಸಾಧನೆಗಳ ಪಟ್ಟಿ ನೀಡಿದ್ರು.
ಬಂಗಾರಪೇಟೆಯಿಂದ ಕೆಜಿಎಫ್ ವರೆಗೆ ಬೈಕ್ ರ್‍ಯಾಲಿ: ಸಮಾವೇಶಕ್ಕೂ ಮುನ್ನ ಕೋಲಾರ ಜಿಲ್ಲೆಯ ಬಂಗಾರಪೇಟೆಯಿಂದ ಕೆಜಿಎಫ್ ವರೆಗೆ ಬೈಕ್ ರ್‍ಯಾಲಿ ಹಮ್ಮಿಕೊಳ್ಳಲಾಗಿತ್ತು. ಅಣ್ಣಾಮಲೈ ಹಾಗೂ ವಿಜಯೇಂದ್ರ ಬೈಕ್ ರ್‍ಯಾಲಿಯಲ್ಲಿ ಭಾಗಿಯಾದ ಬಳಿಕ ಸಮಾವೇಶಕ್ಕೆ ಆಗಮಿಸಿದ್ರು. ಕೋಲಾರ ಸಂಸದ ಮುನಿಸ್ವಾಮಿ ಸೇರಿದಂತೆ ವಿಜಯೇಂದ್ರ ಹಾಗು ಜಿಲ್ಲಾ ಬಿಜೆಪಿ ಮುಖಂಡರು ಇದ್ದರು.
ಇದನ್ನೂ ಓದಿ : ಸಿಎಂ ಹುದ್ದೆಗೆ ಜಗಳ ಆಡೋರು, ಬೆಂಗಳೂರು ಉದ್ಧಾರ ಮಾಡಲ್ಲ: ಕಾಂಗ್ರೆಸ್ ವಿರುದ್ಧ ಅಮಿತ್ ಶಾ ವಾಗ್ದಾಳಿ