ಕೋಲಾರ: ಅತ್ಯಂತ ನಮ್ರತೆಯಿಂದ ಸುಪ್ರೀಂಕೋರ್ಟ್ ಅದೇಶವನ್ನು ಪಾಲಿಸುವೆ ಎಂದು ಸ್ಪೀಕರ್ ರಮೇಶ್ ಕುಮಾರ್ ಹೇಳಿದರು.
ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ಕುರಿತು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋರ್ಟ್ ಹೆಚ್ಚಿನ ಹೊರೆಯನ್ನ ನನ್ನ ಮೇಲೆ ಹಾಕಿದೆ. ಸಂವಿಧಾನದ ಆಶಯಗಳನ್ನು ಗೌರವಿಸುವೆ. ನಮ್ಮ ನಿಯಮಾವಳಿಗಳನ್ನ ಪಾಲಿಸಿಕೊಂಡು ಅವರ ಆಶಯಗಳಿಗೂ ಭಂಗ ಆಗದಂತೆ ಸಂವಿಧಾನದ ಆಶಯಗಳಿಗೂ ಲೋಪ ಆಗದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳುತ್ತೇನೆ ಎಂದರು.
ನಿಷ್ಪಕ್ಷಪಾತವಾಗಿ, ವಿವೇಚನೆಯಿಂದ ಅನಿರ್ಧಿಷ್ಟ ಕಾಲದವರೆಗೆ ಮುಂದೆ ಹಾಕದೇ ಸಂವಿಧಾನ ಕೊಟ್ಟಿರುವ ಜವಾಬ್ದಾರಿಯನ್ನ ನಿಭಾಯಿಸಬೇಕೆಂದು ಸುಪ್ರೀಂಕೋರ್ಟ್ ಹೇಳಿದೆ. ಅದನ್ನ ನಾನು ಪಾಲಿಸುತ್ತೇನೆ ಎಂದು ತಿಳಿಸಿದರು. ಇನ್ನು ವಿಶ್ವಾಸ ಮತಯಾಚನೆ ನಾಳೆ ಚರ್ಚೆಗೆ ಬರಲಿದ್ದು, ಎರಡೂ ಕಡೆಯವರು ಚರ್ಚೆಯಲ್ಲಿ ಭಾಗವಹಿಸಲಿದ್ದಾರೆ. ಸಭೆಯಲ್ಲಿ ಏನಾಗುತ್ತೆ ಎಂಬುದನ್ನ ನೋಡಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದರು.