ಕೋಲಾರ: ಕೊರೊನಾದಿಂದ ಜಿಲ್ಲೆಯ ಮುಳಬಾಗಿಲು ತಾಲೂಕಿನ ಸೊಣ್ಣವಾಡಿ ಗ್ರಾಮ ಸಂಪೂರ್ಣ ಸೀಲ್ಡೌನ್ ಆಗಿದ್ದು, ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಮೇ17 ರಂದು ಈ ಗ್ರಾಮದ ತರಕಾರಿ ವ್ಯಾಪಾರಿಯೊಬ್ಬನಲ್ಲಿ ಕೊರೊನಾ ಸೋಂಕು ಪತ್ತೆಯಾಗಿತ್ತು. ಪರಿಣಾಮ ಈ ಗ್ರಾಮವನ್ನು ಕಂಟೇನ್ಮೆಂಟ್ ಝೋನ್ ಎಂದು ಘೋಷಣೆ ಮಾಡಲಾಗಿದೆ. ಪರಿಣಾಮ ಅಂದಿನಿಂದ ಈ ಗ್ರಾಮದ ಜನರು ನಿಂತ ನೀರಾಗಿದ್ದಾರೆ. ಮನೆಯಲ್ಲಿ ಏನಿದೆ ಏನಿಲ್ಲ ಎಂದು ಕೇಳೋರಿಲ್ಲ, ಜನ ಜಾನುವಾರುಗಳ ಪರಿಸ್ಥಿತಿಯಂತೂ ಹೇಳ ತೀರದಾಗಿದೆ. ಹೊಲದಲ್ಲಿ ಬೆಳೆದಿದ್ದ ಬೆಳೆ ಏನಾಯ್ತೋ ಎಂಬ ಚಿಂತೆಯಲ್ಲಿ ಜನ ಕಾಲ ಕಳೆಯುವ ಪರಿಸ್ಥಿತಿ ನಿರ್ಮಾಣವಾಗಿದೆ.
ಸೊಣ್ಣವಾಡಿ ಗ್ರಾಮದಲ್ಲಿ ಸರಿ ಸುಮಾರು 255 ಮನೆಗಳಿಗೆ 1,400 ಜನ ಸಂಖ್ಯೆ ಇರುವ ಗ್ರಾಮದಲ್ಲಿ ಬಹುತೇಕ ಜನರು ವ್ಯವಸಾಯ ಮತ್ತು ಕೂಲಿ ಕೆಲಸ ಮಾಡೋರೆ ಹೆಚ್ಚು ಜನರಿದ್ದಾರೆ. ಕುಡಿಯುವ ನೀರು, ತರಕಾರಿ, ಹಾಲು, ಔಷಧ ಹೀಗೆ ಏನು ಸಿಗುತ್ತಿಲ್ಲ ಎಂದು ಜನ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇನ್ನು ಗ್ರಾಮದ ಕುಡಿವ ನೀರಿನ ಘಟಕದಲ್ಲೂ ಸರಿಯಾದ ನೀರಿನ ಸರಬರಾಜಾಗುತ್ತಿಲ್ಲ ಅನ್ನೋದು ಜನರ ಮಾತಾಗಿದೆ.