ಕೋಲಾರ: ಆಸ್ತಿಗಾಗಿ ಹೆತ್ತ ತಾಯಿಯನ್ನು ಕೊಂದ ಮಗನಿಗೆ ಜೀವಾವಧಿ ಶಿಕ್ಷೆಯಾಗಿರುವ ಘಟನೆ ಕೋಲಾರದಲ್ಲಿ ಜರುಗಿದೆ. ಪಿತ್ರಾರ್ಜಿತ ಆಸ್ತಿಗಾಗಿ ತನ್ನ ಹೆತ್ತ ತಾಯಿಯನ್ನೇ ಕೊಲೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗೆ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.
ಜಿಲ್ಲೆಯ ಬಂಗಾರಪೇಟೆ ಪಟ್ಟಣದ ಕುಪ್ಪಸ್ವಾಮಿ ಮೊದಲಿಯಾರ್ ಬಡಾವಣೆಯ ನಿವಾಸಿ ಮಂಜುನಾಥ್ ಶೆಟ್ಟಿ ಶಿಕ್ಷೆಗೊಳಗಾದವ. ಆಸ್ತಿ ವಿಚಾರವಾಗಿ 2019 ಅಕ್ಟೋಬರ್-8 ರಂದು ಮಂಜುನಾಥ್ ಶೆಟ್ಟಿ ತನ್ನ ತಾಯಿ ಸತ್ಯಲಕ್ಷ್ಮಿ ಅವರನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದ. ಈ ಬಗ್ಗೆ ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆ ನಡೆಸಿ ಬಂಗಾರಪೇಟೆ ಪೊಲೀಸರು ಕೋರ್ಟ್ಗೆ ಚಾರ್ಜ್ ಶೀಟ್ ಸಲ್ಲಿಸಿದ್ದರು, ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪಿಗೆ ಜೀವಾವಧಿ ಶಿಕ್ಷೆ ನೀಡಿ ತೀರ್ಪು ಪ್ರಕಟಿಸಿದೆ.
ಪ್ರಕರಣದ ಹಿನ್ನೆಲೆ: ಜಿಲ್ಲೆ ಬಂಗಾರಪೇಟೆ ಪಟ್ಟಣದ ಕುಪ್ಪಸ್ವಾಮಿ ಮೊದಲಿಯರ್ ಬಡಾವಣೆಯ ರಾಧಾಕೃಷ್ಣಯ್ಯಶೆಟ್ಟಿ ಎಂಬುವರ ಮಗ ಸಿ.ಆರ್. ಮಂಜುನಾಥ್ಶೆಟ್ಟಿ ಹಲವಾರು ವರ್ಷಗಳಿಂದ ಮನೆಬಿಟ್ಟು ಹೋಗಿ, ತಮಿಳುನಾಡಿನ ಕೊಯಮತ್ತೂರಿನಲ್ಲಿ ಹೋಟೆಲ್ ನಲ್ಲಿ ಕೆಲಸ ಮಾಡಿಕೊಂಡಿದ್ದ, ಆದರೆ ಈ ವೇಳೆ ಕೆಲವು ಜ್ಯೋತಿಷಿಗಳು ನಿಮ್ಮ ಪೂರ್ವಿಕರು ಮಾಡಿರುವ ಕೋಟ್ಯಾಂತರ ರೂಪಾಯಿ ಆಸ್ತಿ ಪಾಸ್ತಿ ಇದೆ ಎಂದು ಹೇಳಿದ ಮಾತನ್ನು ನಂಬಿಕೊಂಡು ಬಂದವನೇ, ತಮ್ಮ ಪೂರ್ವಿಕರ ಆಸ್ತಿ ಪಾಸ್ತಿಯ ಬಗ್ಗೆ ಮಾಹಿತಿ ಕೇಳಿದ್ದ. ಈ ಬಗ್ಗೆ ತನಗೇನು ಗೊತ್ತಿಲ್ಲ ಎಂದಿದ್ದರು, ಇದರಿಂದ ಕೋಪಗೊಂಡಿದ್ದ ಮಗ ಮಂಜುನಾಥ್ಶೆಟ್ಟಿ ತನ್ನ ತಾಯಿಯನ್ನು ದಿಂಬಿನಿಂದ ಉಸಿರುಗಟ್ಟಿಸಿ, ನಂತರ ವಯರ್ನಿಂದ ಕುತ್ತಿಗೆ ಬಿಗಿದು, ಕೊನೆಗೆ ಚಾಕುವಿನಿಂದ ಚುಚ್ಚಿ ಕೊಲೆ ಮಾಡಿದ್ದ.
ಇನ್ನು ತಮ್ಮ ಮೈಮೇಲೆ ವಿಜಯವಾಡ ಕನ್ನಿಕಾಪರಮೇಶ್ವರಿ ಮೈಮೇಲೆ ಬರ್ತಾಳೆ ಎಂದು ಹೇಳಿಕೊಂಡಿದ್ದ ಇವನು, ಹೆಣ್ಣಿನಂತೆ ಸೀರೆಯುಟ್ಟು ತುಟಿಗೆ ಲಿಪ್ ಸ್ಟಿಕ್, ಕಣ್ಣಿಗೆ ಕಾಡಿಗೆ ಹಚ್ಚಿ ಅಲಂಕಾರ ಮಾಡಿಕೊಂಡು ನೃತ್ಯ ಮಾಡುತ್ತಿದ್ದನಂತೆ. ಅಷ್ಟೇ ಅಲ್ಲದೆ ತನ್ನ ತಾತ ಬೆಲ್ಲಕೊಂಡ ಗೋವಿಂದಶೆಟ್ಟಿ ತನಗೆ ಸ್ವಪ್ನದಲ್ಲಿ ಬಂದು ಹೇಳಿದ್ದಾರೆ ನೀನು ನನ್ನ ತಾಯಿಯಲ್ಲ ಎಂದು ಆಗಾಗ ಹಿಂಸೆ ಮಾಡುತ್ತಿದ್ದನಂತೆ, ಹೀಗಿರುವಾಗಲೇ ಅಕ್ಟೋಬರ್-8 ರ ರಾತ್ರಿ ಮನೆಯಲ್ಲಿ ಯಾರೂ ಇಲ್ಲದ ವೇಳೆ ಉಸಿರುಗಟ್ಟಿಸಿ ಕೊಲೆ ಮಾಡಿದ್ದ.
ತಾಯಿ ಕೊಂದ ಆರೋಪಿಗೆ ಜೀವಾವಧಿ ಶಿಕ್ಷೆ : ಇನ್ನು ಈ ಸಂಬಂಧ ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿತ್ತು, ನಂತರ ಪ್ರಕರಣದ ತನಿಖೆ ನಡೆಸಿದ ಬಂಗಾರಪೇಟೆ ಪೊಲೀಸರು ಕೆಜಿಎಫ್ ಜಿಲ್ಲಾ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಈ ಸಂಬಂದ ವಿಚಾರಣೆ ನಡೆಸಿದ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಡಿ.ಪವನೇಶ್, ಆರೋಪಿ ಮಂಜುನಾಥ್ ಶೆಟ್ಟಿಗೆ ಜೀವಾವಧಿ ಶಿಕ್ಷೆ ಹಾಗೂ 20 ಸಾವಿರ ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿ ಆದೇಶಿಸಿದ್ದಾರೆ.
ಓದಿ: ರಮೇಶ್ ಜಾರಕಿಹೊಳಿ ಮತ್ತೆ ಸಚಿವರಾಗಲಿದ್ದಾರೆ; ಶಾಸಕ ಕುಮಟಳ್ಳಿ ವಿಶ್ವಾಸ