ಕೋಲಾರ: ಜಿಲ್ಲೆಯಲ್ಲಿ ಸುರಿದ ಮಳೆಯಿಂದಾಗಿ ನಗರದ ಬಹುತೇಕ ರಸ್ತೆಗಳು ಕೆಸರು ಗದ್ದೆಗಳಾಂತಗಿದ್ದು, ವಾಹನ ಸವಾರರು ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.
ನಗರ ಸೇರಿ ಜಿಲ್ಲೆಯ ಬಹುತೇಕ ರಸ್ತೆಗಳು ಸಂಚಾರಕ್ಕೆ ಯೋಗ್ಯವಿಲ್ಲದಂತೆ ಹಾಳಾಗಿದ್ದು, ಮೊಣಕಾಲುದ್ದ ಗುಂಡಿಗಳು ಬಿದ್ದು ವಾಹನ ಸವಾರರಿಗೆ ಮೃತ್ಯುಕೂಪವಾಗಿವೆ. ಹಲವೆಡೆ ರಸ್ತೆಗಳನ್ನು ಅಮೃತ್ ಸಿಟಿ ಯೋಜನೆಗೆ ಅಗೆದಿರುವುದರಿಂದ ಕೆಸರು ಗದ್ದೆಗಳಾಂತಗಿವೆ. ಇದರ ಮಧ್ಯೆ ಕೆಲವೆಡೆ ನೀರು ತುಂಬಿಕೊಂಡು ರಸ್ತೆಗಳೇ ಕಾಣದಂತಾಗಿವೆ. ರಸ್ತೆಯಲ್ಲಿ ಹೆಜ್ಜೆ-ಹೆಜ್ಜೆಗೂ ಗುಂಡಿಗಳು ಬಿದ್ದಿದ್ದು, ವಾಹನ ಸವಾರರು ಈ ಹೊಂಡಗಳನ್ನು ತಪ್ಪಿಸಿ ಸಂಚರಿಸುವುದೇ ದೊಡ್ಡ ಸವಾಲಾಗಿದೆ. ಈ ಮಧ್ಯೆ ರೈತ ಸಂಘದ ಕಾರ್ಯಕರ್ತರು ರಸ್ತೆಯಲ್ಲಿ ನಿರ್ಮಾಣವಾಗಿರುವ ಹೊಂಡಗಳಿಗೆ ಬಾಗಿನ ಅರ್ಪಿಸಿ, ವಿಭಿನ್ನವಾಗಿ ಪ್ರತಿಭಟನೆ ನಡೆಸಿದ್ದಾರೆ.
ನಗರಕ್ಕೆ ಪ್ರವೇಶಿಸುವ ಎಪಿಎಂಸಿ ಮಾರುಕಟ್ಟೆಯಿಂದ ಆರಂಭವಾಗಿ ಟಮಕದವರೆಗೂ ಇದೇ ಸಮಸ್ಯೆ. ಬಸ್ ನಿಲ್ದಾಣ, ಟವರ್, ಡೂಂ ಲೈಟ್, ಇಟಿಸಿಎಂ, ಬೆಸ್ಕಾಂ ಮುಂಭಾಗ ಸೇರಿದಂತೆ ಸಂಗೊಂಡಹಳ್ಳಿ ಅಂಡರ್ ಪಾಸ್ ಸೇರಿ ಹಲವೆಡೆ ದೊಡ್ಡ-ದೊಡ್ಡ ಹೊಂಡಗಳಾಗಿವೆ. ಇನ್ನು ಮಹಾಲಕ್ಷ್ಮಿ ಬಡಾವಣೆಯ ಬೆಂಗಳೂರು-ಮದ್ರಾಸ್ ಮುಖ್ಯರಸ್ತೆ ಸಂಪೂರ್ಣ ನೀರಿನಿಂದ ತುಂಬಿಹೋಗಿದೆ. ಕೋಲಾರ ಶಾಸಕ ಕೆ.ಶ್ರೀನಿವಾಸಗೌಡರ ಮನೆಯ ಎದುರಲ್ಲೇ ಇಂತಹ ಪರಿಸ್ಥಿತಿ ನಿರ್ಮಾಣವಾಗಿದ್ದರೂ ಕೂಡ ರಸ್ತೆ ದುರಸ್ತಿಗೆ ಮುಂದಾಗುತ್ತಿಲ್ಲ.
ಈ ಬಗ್ಗೆ ಅಧಿಕಾರಿಗಳನ್ನು ಕೇಳಿದರೆ ಹೊಂಡಗಳಾಗಿರುವುದು ನಿಜ. ಈಗಾಗಲೇ ಟೆಂಡರ್ ಪ್ರಕ್ರಿಯೆ ನಡೆದಿದ್ದು, ಆದಷ್ಟು ಬೇಗ ರಸ್ತೆ ದುರಸ್ತಿಪಡಿಸಲಾಗುವುದು ಎನ್ನುತ್ತಿದ್ದಾರೆ.