ಕೋಲಾರ : ಜಿಲ್ಲೆಯಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆ ಆಗುತ್ತಿದೆ. ಬಹುತೇಕ ಕೆರೆಗಳು ಭರ್ತಿಯಾಗಿ ಕೋಡಿ ತುಂಬಿ ಹರಿಯುತ್ತಿವೆ. 20 ವರ್ಷಗಳಿಂದ ಖಾಲಿಯಿದ್ದ ಕೆರೆಗಳು ಇದೀಗ ಭರ್ತಿ ಆಗಿದ್ದರಿಂದಾಗಿ ರೈತರ ಮೊಗದಲ್ಲಿ ಸಂತಸ ಮೂಡಿದೆ.
ಸಾವಿರಾರು ಎಕರೆಯ ವಿಸ್ತೀರ್ಣದ ಮುದುವಾಡಿ ಕೆರೆಯೂ ಸಹ 20 ವರ್ಷಗಳ ಬಳಿಕ ಭರ್ತಿಯಾಗಿದೆ. ಕೆ ಸಿ ವ್ಯಾಲಿ ನೀರನ ಜೊತೆ ಮಳೆ ನೀರು ಸಹ ಮಿಶ್ರಣವಾಗಿ ಕೆರೆ ಕೋಡಿ ಹರಿಯುತ್ತಿರುವುದರಿಂದ ರಸ್ತೆಯ ಮೇಲೆ ನೀರು ಹರಿಯುತ್ತಿದೆ.
ಕೋಲಾರ-ಶ್ರೀನಿವಾಸಪುರ ಮಾರ್ಗದಲ್ಲಿ ಸಂಚಾರ ವ್ಯವಸ್ಥೆಯಲ್ಲಿ ಅಡಚಣೆ ಉಂಟಾಗಿದೆ. ಮುದುವಾಡಿ ಕೆರೆಯ ಸೇತುವೆ ಮೇಲೆ ನೀರು ರಭಸವಾಗಿ ಹರಿಯುತ್ತಿದೆ. ಇದರಿಂದ ವಾಹನ ಸವಾರರು ಜೀವ ಕೈಯಲ್ಲಿ ಹಿಡಿದು ಸಂಚರಿಸುವಂತಾಗಿದೆ.
ಸೇತುವೆ ಮೇಲೆ ನೀರು ಹರಿಯುತ್ತಿರುವ ಪರಿಣಾಮ ರೈತರು ತರಕಾರಿ ಮಾರಾಟ ಮಾಡಲು ಕೋಲಾರಕ್ಕೆ ಬರುವುದು ಸಹ ಕಷ್ಟವಾಗಿದೆ. ಈ ಕೂಡಲೇ ಅಧಿಕಾರಿಗಳು ಇತ್ತ ಗಮನಹರಿಸಿ ಸಮಸ್ಯೆ ಬಗೆಹರಿಸಬೇಕೆಂದು ಕೇಳಿಕೊಂಡಿದ್ದಾರೆ.