ಕೋಲಾರ : ಚೆನ್ನೈನಿಂದ ಕೋಲಾರಕ್ಕೆ ಬಂದಿದ್ದ ಕುಟುಂಬವೊಂದು ಲಾಕ್ಡೌನ್ನಿಂದಾಗಿ ಪರಿತಪಿಸುವಂತಾಗಿದೆ.
ಈ ಕುಟುಂಬದ ಮಗ ಕಾಣೆಯಾಗಿರುವುದರಿಂದ ಪುಟ್ಟ ಬಾಲಕಿ ಫಾತಿಮಾ, ಕಾಲು ಕಳೆದುಕೊಂಡಿರುವ ತನ್ನ ತಾಯಿಯನ್ನು ಗಾಲಿ ಕುರ್ಚಿಯಲ್ಲಿ ಕೂರಿಸಿ ಸಹೋದರನನ್ನು ಹುಡುಕಾಡುತ್ತಿದ್ದಾಳೆ. ತಾಯಿ ಹಾಗೂ ಇಬ್ಬರು ಮಕ್ಕಳು ಮೂರು ತಿಂಗಳ ಹಿಂದೆ ಕೆಲಸ ಹುಡುಕಿಕೊಂಡು ಚೆನ್ನೈನಿಂದ ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿಗೆ ಬಂದಿದ್ದರು. ಆದರೆ, ಮಗ ಕಾಣೆಯಾಗಿರುವುದರಿಂದ ಹಾಗೂ ಲಾಕ್ಡೌನ್ ಹಿನ್ನೆಲೆ ತಾಯಿ ಹಾಗೂ ಮಗಳು ಭಿಕ್ಷೆ ಬೇಡುವ ಪರಿಸ್ಥಿತಿ ಎದುರಾಗಿದೆ.
ಫಾತಿಮಾ ತನ್ನ ತಾಯಿಯನ್ನು ಗಾಲಿಕುರ್ಚಿಯಲ್ಲಿ ಕುಳ್ಳಿರಿಸಿ ಇಡೀ ಬಂಗಾರಪೇಟೆಯ ಪಟ್ಟಣವನ್ನು ಅಲೆದರೂ ಯಾವುದೇ ಪ್ರಯೋಜನವಾಗಲಿಲ್ಲ. ಆಕೆಯ ಸಹೋದರ ಎಲ್ಲಿಯೂ ಪತ್ತೆಯಾಗಲಿಲ್ಲ. ಇತ್ತೀಚೆಗೆ ಫಾತಿಮಾಳಿಗೆ ತನ್ನ ಸಹೋದರ ಕೋಲಾರದಲ್ಲಿದ್ದಾನೆ ಎಂದು ತಿಳಿದು, ತನ್ನ ತಾಯಿಯನ್ನು ಗಾಲಿಕುರ್ಚಿಯಲ್ಲಿ ತಳ್ಳುತ್ತ ಬಾಲಕಿ ಬಂಗಾರಪೇಟೆಯಿಂದ 15 ಕಿ.ಮೀ ದೂರವನ್ನು ಕಾಲ್ನಡಿಗೆಯಲ್ಲೇ ಕ್ರಮಿಸಿ ಕೋಲಾರಕ್ಕೆ ತಲುಪುತ್ತಾಳೆ. ಆದರೆ, ತಾಯಿ-ಮಗಳು ಕೋಲಾರದಲ್ಲಿಯೂ ಮಗನನ್ನು ಕಂಡು ಹಿಡಿಯಲು ಸಾಧ್ಯವಾಗಲಿಲ್ಲ.
ಮಗನ ಫೋಟೋ ಕೂಡಾ ಇಲ್ಲದ ಕಾರಣ ಹುಡುಕಾಟ ಕಷ್ಟವಾಗಿದೆ. ಜೀವನ ಸಾಗಿಸಲು ಹಣವಿಲ್ಲದೇ ತಾಯಿ ಹಾಗೂ ಮಗಳು ಸೇರಿ ಮಗನನ್ನು ಹುಡುಕುತ್ತಿದ್ದಾರೆ.