ಕೋಲಾರ: ಕೊರೊನಾ ಸೋಂಕಿತ ಪ್ರದೇಶಗಳನ್ನು ಸೀಲ್‌ಡೌನ್ ಮಾಡ್ತಿದ್ದ ಪೊಲೀಸರಿಗೆ ಇದೀಗ ತಮ್ಮ ಠಾಣೆಯನ್ನ ಸೀಲ್‌ಡೌನ್ ಮಾಡುವಂತಹ ಪರಿಸ್ಥಿತಿ ಸದ್ಯ ಮುಳಬಾಗಿಲು ನಗರ ಪೊಲೀಸರಿಗೆ ಬಂದೊದಗಿದೆ.
ಜೂನ್ - 7 ರಂದು ವರದಕ್ಷಿಣೆ ಕಿರುಕುಳದಿಂದ ಬೇಸತ್ತು ನವವಿವಾಹಿತೆಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರಕರಣ ಮುಳಬಾಗಿಲಿನ ಹೈದರ್ ನಗರದಲ್ಲಿ ನಡೆದಿತ್ತು. ಈ ಪ್ರಕರಣದ ಸಂಬಂಧ ಬೆಂಗಳೂರಿನ ಕೆ.ಆರ್.ಪುರಂನ ನಿವಾಸಿ ಆರೋಪಿ ಪತಿಯನ್ನ ಮುಳಬಾಗಿಲು ನಗರ ಠಾಣೆಯ ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದರು. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸುವ ಮೊದಲು ಅಂದರೆ 12ನೇ ತಾರೀಖಿನಂದು ಕೋವಿಡ್ ಟೆಸ್ಟ್ ಮಾಡಿಸಿ ಆತನನ್ನು ಕ್ವಾರಂಟೈನ್ ಮಾಡಲಾಗಿತ್ತು.
ಆದ್ರೆ ಆರೋಪಿಯ ವರದಿ ಪಾಸಿಟಿವ್ ಬಂದ ಹಿನ್ನೆಲೆ, ವಿಚಾರಣೆ ವೇಳೆ ಆತನ ಸಂಪರ್ಕಕ್ಕೆ ಬಂದಿದ್ದ ಡಿವೈಎಸ್ಪಿ, ಪಿಎಸ್ಐ ಸೇರಿದಂತೆ ಒಟ್ಟು 22 ಜನ ಪೊಲೀಸರನ್ನು ಕ್ವಾರಂಟೈನ್ ಮಾಡಿ, ಮುಳಬಾಗಿಲು ನಗರ ಪೊಲೀಸ್ ಠಾಣೆ ಮತ್ತು ಡಿವೈಎಸ್ಪಿ ಕಚೇರಿಯನ್ನು ಸೀಲ್‌ಡೌನ್ ಮಾಡಲಾಗಿದೆ. ಜೊತೆಗೆ ಎಲ್ಲ ಪೊಲೀಸ್ ಸಿಬ್ಬಂದಿಯನ್ನ ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿದೆ.
ವೈದ್ಯರಿಗೆ ಕ್ವಾರಂಟೇನ್: ಮತ್ತೊಂದೆಡೆ ಕೋಲಾರದಲ್ಲಿ ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯರು, ನರ್ಸ್ಗಳು, ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಸೇರಿ ಒಟ್ಟು 14 ಜನರಿಗೆ ಕ್ವಾರಂಟೈನ್ ಮಾಡಲಾಗಿದೆ. ಕೋಲಾರದ ಷಹಿಂಷಾ ನಗರದ 45 ವರ್ಷ ವಯಸ್ಸಿನ ಆಟೋ ಚಾಲಕರೊಬ್ಬರು ಸಕ್ಕರೆ ಕಾಯಿಲೆ ಹಾಗೂ ಅಧಿಕ ರಕ್ತದೊತ್ತಡದ ಕಾರಣ ಆಸ್ಪತ್ರೆಗೆ ದಾಖಲಾಗಿದ್ರು. ಈ ವೇಳೆ ಅವರಿಗೆ ಕೋಲಾರದ ಜಿಲ್ಲಾ ಆಸ್ಪತ್ರೆಯ ಸಿಬ್ಬಂದಿ ಮತ್ತು ವೈದ್ಯರು ಚಿಕಿತ್ಸೆ ನೀಡಿದ್ದರು. ಈ ವೇಳೆ, ಅನಾರೋಗ್ಯ ಪೀಡಿತ ವ್ಯಕ್ತಿಯಲ್ಲಿ ಕೊರೊನಾ ಪಾಸಿಟಿವ್ ಬಂದ ಹಿನ್ನೆಲೆ ಆತನಿಗೆ ಚಿಕಿತ್ಸೆ ನೀಡಿದ್ದ ಇಬ್ಬರು ವೈದ್ಯರು ಸೇರಿ ಒಟ್ಟು 14 ಜನ ಜಿಲ್ಲಾಸ್ಪತ್ರೆ ಸಿಬ್ಬಂದಿಯನ್ನ ಕ್ವಾರಂಟೈನ್ ಮಾಡಲಾಗಿದೆ.
ಕೊರೊನಾ ವಿರುದ್ಧ ಹೋರಾಟ ಮಾಡುತ್ತಿರುವವರ ಮೇಲೆ ಕೊರೊನಾ ಅಟ್ಟಹಾಸ ಮೆರೆಯುತ್ತಿದ್ದು, ಕೊರೊನಾ ವಿರುದ್ಧ ಹೋರಾಡುವ ವಾರಿಯರ್ಸ್ ತಮಗೂ ಎಲ್ಲಿ ಕೊರೊನಾ ಸೋಂಕು ಹರಡುತ್ತದೋ ಅನ್ನೋ ಆತಂಕದಲ್ಲೇ ಕರ್ತವ್ಯ ನಿರ್ವಹಿಸುತ್ತಿದ್ದಾರೆ.