ಕೋಲಾರ: ಮುಳಬಾಗಿಲು ನಗರದ ಹೊಸಪಾಳ್ಯದಲ್ಲಿನ ಯುವತಿಯೊಬ್ಬಳು ನಿಗೂಢವಾಗಿ ಕೊಲೆಯಾಗಿರುವ ಪ್ರಕರಣ ಬೆಳಕಿಗೆ ಬಂದಿದೆ.
ಹೊಸಪಾಳ್ಯ ಬಡಾವಣೆ ನಿವಾಸಿ ರವಿಪ್ರಸಾದ್ ಎಂಬುವರ ಮಗಳಾದ ಪ್ರಿಯಾಂಕ ಮನೆಯಲ್ಲಿಯೇ ನಿಗೂಢವಾಗಿ ಕೊಲೆಯಾಗಿದ್ದಾಳೆ. ಶೇಷಾದ್ರಿಪುರಂ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದ ಪ್ರಿಯಾಂಕ, ಕಳೆದ ನಾಲ್ಕೈದು ದಿನದಿಂದ ಕಾಲೇಜಿಗೆ ಹೋಗದೆ ಮನೆಯಲ್ಲಿಯೇ ಒಂಟಿಯಾಗಿದ್ದಳು ಎನ್ನಲಾಗಿದೆ.
ತಂದೆ ಹಾಗೂ ತನ್ನ ಅಣ್ಣನಿಗೆ ಕಾಲೇಜಿಗೆ ಹೋಗಲು ಮನಸ್ಸಿಲ್ಲ ಎಂದು ಹೇಳಿದ್ದ ಯುವತಿ, ಮನೆಯಲ್ಲಿಯೇ ತಂಗಿದ್ದಾಳೆ. ಕೆಲಸಕ್ಕೆ ಹೋಗಿದ್ದ ತಂದೆ ಹಾಗೂ ಸಹೋದರ ರಾಜು ಮರಳಿ ಮನೆಗೆ ಬಂದಾಗ ಹಾಸಿಗೆಯಲ್ಲಿ ಮಲಗಿದ ಸ್ಥಿತಿಯಲ್ಲಿದ್ದ ಆಕೆಯನ್ನು ಹತ್ತಿರಕ್ಕೆ ಹೋಗಿ ನೋಡಿದಾಗ, ಯಾರೋ ಅವಳ ಕುತ್ತಿಗೆ ಹಿಸುಕಿ ಕೊಲೆ ಮಾಡಿರುವುದು ಗೊತ್ತಾಗಿದೆ. ಇದರಿಂದಾಗಿ ಅಕ್ಕಪಕ್ಕದ ಮನೆಯಲ್ಲಿ ವಿಚಾರಣೆ ಮಾಡಿದ ಪೋಷಕರಿಗೆ ಮನೆಗೆ ಅಪರಿಚಿತ ಯುವಕನೊಬ್ಬ ಬಂದಿದ್ದ ಬಗ್ಗೆ ಮಾಹಿತಿ ತಿಳಿದುಬಂದಿದೆ.
ಕಳೆದ 15 ವರ್ಷಗಳ ಹಿಂದೆಯೇ, ಸಾಂಸರಿಕ ಕಲಹಗಳಿಂದ ಪ್ರಿಯಾಂಕಳ ತಂದೆ ರವಿಪ್ರಸಾದ್ ಹಾಗೂ ತಾಯಿ ಮೀನಾಕ್ಷಿ ದೂರವಾಗಿದ್ದರು. ಆದರೆ, ಕಳೆದ ಎರಡು-ಮೂರು ವರ್ಷಗಳಿಂದೀಚೆಗೆ ತಾಯಿ ಮೀನಾಕ್ಷಿ ಮಕ್ಕಳೊಂದಿಗೆ ಆಗಾಗ ಮಾತನಾಡುತ್ತಿದ್ದರು. ಜೊತೆಗೆ, ಆಗಾಗ ತನ್ನ ಮನೆಗೂ ಕರೆದುಕೊಂಡು ಹೋಗಿದ್ದಾರೆ. ಹೀಗಿರುವಾಗಲೇ ಶೇಷಾದ್ರಿಪುರಂ ಕಾಲೇಜಿಗೆ ಹೋಗುತ್ತಿದ್ದ ಪ್ರಿಯಾಂಕಳನ್ನು ಇತ್ತೀಚೆಗೆ ಬೆಂಗಳೂರು ಹುಳುಮಾವಿನ ರಾಜೇಶ್ ಎಂಬ ಯುವಕ ಪ್ರೀತಿಸುವಂತೆ ಒತ್ತಾಯಿಸಿದ್ದಾನೆ. ಈ ವಿಷಯವನ್ನು ತನ್ನ ತಂದೆಗೆ ಹೇಳಿದ್ದ ಮಗಳು, ತಾಯಿ ಬಳಿಯೂ ಹೇಳಿದ್ದಾಳೆ. ಆಗ ತಂದೆ ರವಿಪ್ರಸಾದ್ ಆ ಹುಡುಗನೊಂದಿಗೆ ಮಾತನಾಡಿ ಬುದ್ದಿ ಹೇಳಿ ಬಂದಿದ್ದರಂತೆ. ಅದಾದ ಮೇಲೆ ಎಲ್ಲವೂ ಸರಿಹೋಗಿತ್ತಂತೆ. ಆದರೆ, ಇದ್ದಕ್ಕಿದ್ದಂತೆ ಕಳೆದ ನಾಲ್ಕೈದು ದಿನಗಳ ಹಿಂದೆ ಪ್ರಿಯಾಂಕ ನಾನು ಕಾಲೇಜಿಗೆ ಹೋಗೋದಿಲ್ಲ ಎಂದು ಹೇಳಿದ್ದಾಳೆ. ಈಗ ಇದ್ದಕ್ಕಿದ್ದಂತೆ ಕೊಲೆಯಾಗಿರುವುದು ಹಲವಾರು ಅನುಮಾನಕ್ಕೆ ಕಾರಣವಾಗಿದೆ.
ಇದನ್ನೂ ಓದಿ: ಪ್ರವಾಸಿ ಬಸ್ ಪಲ್ಟಿ: 10ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯ
ಮಗಳ ಕೊಲೆಯ ಹಿಂದೆ ಅವಳನ್ನು ಪ್ರೀತಿಸುತ್ತಿದ್ದ ಹುಡುಗ ಇರಬಹುದು, ಅಥವಾ ಅವಳ ತಂದೆಯೇ ಮುಗಿಸಿರಬಹುದು ಎಂಬ ಅನುಮಾನವನ್ನು ಪ್ರಿಯಾಂಕಳ ತಾಯಿ ಮೀನಾಕ್ಷಿ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಮುಳಬಾಗಿಲು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸುವುದಾಗಿ ಪೊಲೀಸರು ಭರವಸೆ ನೀಡಿದ್ದಾರೆ.