ಕೋಲಾರ : ಇಲ್ಲಿನ ಕೋವಿಡ್ ಆಸ್ಪತ್ರೆಯ ಬಗ್ಗೆ ಹಲವು ದೂರುಗಳು ಕೇಳಿ ಬಂದ ಹಿನ್ನೆಲೆ ಸಂಸದ ಎಸ್ ಮುನಿಸ್ವಾಮಿ ಕೋವಿಡ್ ವಾರ್ಡ್‌ಗೆ ಭೇಟಿ ನೀಡಿ ಪರಿಶೀಲಿಸಿದರು.
ಪಿಪಿಇ ಕಿಟ್ ಧರಿಸಿ ಕೋವಿಡ್ ಆಸ್ಪತ್ರೆಗೆ ತೆರಳಿದ ಅವರು, ಖುದ್ದು ರೋಗಿಗಳನ್ನು ಮಾತನಾಡಿಸಿ ಸೌಲಭ್ಯಗಳ ಮಾಹಿತಿ ಪಡೆದರಲ್ಲದೆ, ಪಿಪಿಇ ಕಿಟ್, ವೆಂಟಿಲೇಟರ್, ಬೆಡ್‌ಗಳ ಕೊರತೆ ಸೇರಿದಂತೆ ಮೂಲಸೌಲಭ್ಯಗಳನ್ನು ವೀಕ್ಷಣೆ ಮಾಡಿದರು.
ಕೋಲಾರದ ಕೋವಿಡ್ ಆಸ್ಪತ್ರೆಯಲ್ಲಿರುವ 300ಕ್ಕೂ ಹೆಚ್ಚು ಕೊರೊನಾ ಸೋಂಕಿತರನ್ನು ಮಾತನಾಡಿಸಿ ಅವರಿಗೆ ಸಿಗುತ್ತಿರುವ ಸೌಲಭ್ಯಗಳ ಕುರಿತು ಖುದ್ದು ಮಾಹಿತಿ ಪಡೆದರು.
ಕಳೆದ ಕೆಲವು ದಿನಗಳಿಂದ ಕೋವಿಡ್ ಆಸ್ಪತ್ರೆಯಲ್ಲಿ ಊಟ-ತಿಂಡಿ, ಶುಚಿತ್ವ ಮತ್ತು ನೀರಿನ ಸಮಸ್ಯೆಗಳ ಬಗ್ಗೆ ಮೇಲಿಂದ ಮೇಲೆ ದೂರುಗಳು ಬರುತ್ತಿದ್ದವು. ಈ ಬಗ್ಗೆ ಮಾಧ್ಯಮಗಳಲ್ಲಿ ವರದಿ ಪ್ರಸಾರವಾದ ಬಳಿಕ ಸಂಸದರು ಕೋವಿಡ್ ಜಿಲ್ಲಾಸ್ಪತ್ರೆಯಲ್ಲಿ ಮುಂದೆ ಯಾವುದೇ ರೀತಿಯ ಸಮಸ್ಯೆಗಳು ಬರದಂತೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಜಿಲ್ಲಾಸ್ಪತ್ರೆಯಲ್ಲಿ ವೆಂಟಿಲೇಟರ್ ಉಪಯೋಗಿಸಲು ತಜ್ಞರಿಗೆ ತರಬೇತಿ ನೀಡಲಾಗಿದೆ, ಪಿಪಿಇ ಕಿಟ್ ಸೇರಿದಂತೆ ಬೆಡ್ ಸಮಸ್ಯೆಯಾಗದಂತೆ ನೋಡಿಕೊಳ್ಳಲಾಗುವುದು ಎಂದು ತಿಳಿಸಿದರು.