ಕೋಲಾರ: ರಾಜ್ಯದ ಅಭಿವೃದ್ಧಿ ಮಾಡದೆ ಸಿಎಂ ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರ ಕೇವಲ ಪ್ರಚಾರಕ್ಕೆ ಮಾತ್ರ ನಿಗಮಗಳನ್ನು ಮಾಡುವುದರಿಂದ ಯಾವುದೇ ಲಾಭವಿಲ್ಲ ಎಂದು ಬಂಗಾರಪೇಟೆ ಕಾಂಗ್ರೆಸ್ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಬಂಗಾರಪೇಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅನಗತ್ಯವಾಗಿ ಜಾತಿಗೊಂದರಂತೆ ನಿಗಮ, ಅಭಿವೃದ್ಧಿ ಮಂಡಳಿ ಮಾಡುವುದರಿಂದ ಆಯಾ ಸಮಾಜಗಳು ಉದ್ಧಾರ ಆಗುತ್ತಾ ಎಂದು ಸರ್ಕಾರಕ್ಕೆ ಪ್ರಶ್ನೆ ಮಾಡಿದ್ದಾರೆ.
ಸರ್ಕಾರ ಅನೇಕ ನಿಗಮಗಳನ್ನು ಮಾಡಿ ಬಿಡಿಗಾಸು ನೀಡಿಲ್ಲ. ನಿಜವಾಗಲೂ ತೊಂದರೆ ಅನುಭವಿಸುತ್ತಿರುವ ಸಮಾಜಕ್ಕೆ ನಿಗಮ ಮಾಡಲಿ, ಅದು ಬಿಟ್ಟು ಹೀಗೆ ಮಾಡುವುದು ಯಾವ ಲಾಭಕ್ಕೆ ಎಂದರು.
ಇದೇ ವೇಳೆ ಕ್ಷೇತ್ರಕ್ಕೆ ಈ ಹಿಂದಿನ ಸರ್ಕಾರ ಬಿಡುಗಡೆ ಮಾಡಿದ್ದ ಹಣ ವಾಪಸ್ ಪಡೆಯಲಾಗಿದ್ದು, ಮುಜರಾಯಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಬಂಗಾರಪೇಟೆಯ ಕೋದಂಡರಾಮಸ್ವಾಮಿ ದೇವಾಲಯಕ್ಕೆ ನೀಡಿದ್ದ ಹಣವನ್ನು ವಾಪಸ್ ಪಡೆದು ಬಿಡುಗಡೆ ಮಾಡಿಲ್ಲ. ಉತ್ತಮ ಕೆಲಸಗಳಿಗೆ ಸರ್ಕಾರ ಮಣೆ ಹಾಕುತ್ತಿಲ್ಲ. ರಾಜ್ಯ ಸರ್ಕಾರ ಇಂದು ಗೊಂದಲದ ಹೇಳಿಕೆಗಳನ್ನು ನೀಡುವ ಮೂಲಕ ಸಮಾಜವನ್ನು ಒಡೆಯುವ ಕೆಲಸ ಮಾಡುತ್ತಿದೆ ಎಂದು ದೂರಿದರು.