ಕೋಲಾರ : ತಲೆ ಕೆಟ್ಟು ಕೆಲವರು ಸಿಎಂ ಸ್ಥಾನದ ಕುರಿತು ಹೇಳಿಕೆ ನೀಡುತ್ತಿದ್ದಾರೆ. ಈ ಬಗ್ಗೆ ತೆಲೆಕೆಡಿಸಿಕೊಳ್ಳುವ ಅಗತ್ಯ ಇಲ್ಲ. ಕಾಂಗ್ರೆಸ್ ಸರ್ಕಾರವು ಸುಭಿಕ್ಷವಾಗಿ ನಡೆದುಕೊಂಡು ಹೋಗುತ್ತಿದೆ ಎಂದು ಶಾಸಕ ಕೊತ್ತೂರು ಮಂಜುನಾಥ್ ಹೇಳಿದ್ದಾರೆ. ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ವೀರಶೈವ ಲಿಂಗಾಯತ ಸಮುದಾಯದ ಅಧಿಕಾರಿಗಳನ್ನು ಮೂಲೆಗುಂಪು ಮಾಡುತ್ತಿದ್ದಾರೆ ಎಂಬ ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿದರು. ಕೆಲವರು ತಲೆ ಕೆಟ್ಟು ಈ ರೀತಿಯೆಲ್ಲ ಮಾತನಾಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷವು ರಾಜ್ಯದಲ್ಲಿ ಜನರ ಆಶೀರ್ವಾದದಿಂದ 136 ಸ್ಥಾನಗಳನ್ನು ಗೆದ್ದಿದೆ. ಸರ್ಕಾರವೂ ಸಹ ಸುಭಿಕ್ಷವಾಗಿ ನಡೆದುಕೊಂಡು ಹೋಗುತ್ತಿದೆ ಎಂದು ಹೇಳಿದರು.
ಯಾವುದಾದರೂ ಶಾಸಕರಿಗೆ ಈ ರೀತಿ ಮಾತನಾಡುವ ಅವಶ್ಯಕತೆ ಇದ್ದರೆ ನಿಮ್ಮ ನಿಮ್ಮ ಕ್ಷೇತ್ರಗಳ, ತಾಲೂಕುಗಳ ಅಭಿವೃದ್ಧಿಯ ಕುರಿತು ಮಾತನಾಡಿ. ಈ ಸಂಬಂಧ ಕ್ಷೇತ್ರದ ಅಭಿವೃದ್ಧಿ ಕುರಿತು ಸಿಎಂ ಹಾಗೂ ಡಿಸಿಎಂ ಅವರ ಬಳಿ ಹೋಗಿ ಮಾತನಾಡಿ, ಕೆಲಸ ಮಾಡಿಸಿಕೊಂಡು ಬರಲಿ. ಈ ರೀತಿ ಮಾತನಾಡುವವರನ್ನು ಪಕ್ಷದಿಂದ ದೂರ ಇಡುವಂತೆ ಪಕ್ಷದ ಹಿರಿಯರಲ್ಲಿ ಮನವಿ ಮಾಡುತ್ತೇನೆ ಎಂದರು.
ಎಲ್ಲರೂ ಮಂತ್ರಿ ಬೇಕು, ಸಿಎಂ ಬೇಕು ಎಂದು ಆಸೆಪಟ್ಟರೆ ಹೇಗೆ ?. ನನಗೂ ಪಿಎಂ ಆಗಬೇಕೆಂದು ಆಸೆ ಇದೆ. ಆದರೆ ಕೈ ಎಲ್ಲಿಯವರೆಗೆ ಎಟುಕುವುದೊ ಅಷ್ಟಕ್ಕೆ ಆಸೆ ಪಡಬೇಕು. ಕೆಲಸ ಮಾಡಲು ಆಸಕ್ತಿ ಇದ್ದರೆ ಕೆಲಸ ಮಾಡಿ. ಅದನ್ನು ಬಿಟ್ಟು ನಮ್ಮ ಜಾತಿಯವರು ಸಿಎಂ ಆಗಬೇಕು, ಮಂತ್ರಿ ಆಗಬೇಕು ಎನ್ನುವುದನ್ನು ಬಿಡಿ ಎಂದು ತಿಳಿಸಿದರು. ಇಂತಹ ವಿಚಾರಗಳನ್ನು ತಲೆಕೆಟ್ಟವರು ಮಾತ್ರ ಮಾತನಾಡುತ್ತಾರೆ. ಆದರೆ ಸರ್ಕಾರ ಸುಭಿಕ್ಷವಾಗಿದೆ. ಸಿದ್ದರಾಮಯ್ಯ ಹಾಗೂ ಡಿಕೆಶಿ ಅವರು ಸುಭಿಕ್ಷವಾಗಿ ಸರ್ಕಾರ ನಡೆಸುತ್ತಿದ್ದಾರೆ ಎಂದು ತಿಳಿಸಿದರು.
ಉದಯನಿಧಿ ಸ್ಟಾಲಿನ್ ವಿರುದ್ಧವೂ ಕಿಡಿ : ಸನಾತನ ಧರ್ಮದ ಕುರಿತು ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ತಮಿಳುನಾಡು ಸಿಎಂ ಸ್ಟಾಲಿನ್ ಪುತ್ರ, ಸಚಿವ ಉದಯನಿಧಿ ಸ್ಟಾಲಿನ್ ವಿರುದ್ಧ ಶಾಸಕ ಮಂಜುನಾಥ್ ವಾಗ್ದಾಳಿ ನಡೆಸಿದರು. ಯಾವುದೇ ಧರ್ಮವನ್ನು ಅವಹೇಳನ ಮಾಡಬಾರದು. ಯಾವುದೇ ಧರ್ಮವನ್ನು ಟೀಕೆ ಮಾಡಬಾರದು. ಧರ್ಮವನ್ನು ಪಾಲನೆ ಮಾಡುವುದು ಅವರವರಿಗೆ ಬಿಟ್ಟಿದ್ದು ಎಂದು ಹೇಳಿದರು. ಭಾರತ ದೇಶದಲ್ಲಿ ಯಾರು ಯಾವ ಧರ್ಮವನ್ನ ಬೇಕಾದರೂ ಪಾಲನೆ ಪಾಲನೆ ಮಾಡಬಹುದು. ಈ ಧರ್ಮವನ್ನು ಪಾಲನೆ ಮಾಡಬೇಡ ಎನ್ನುವುದಕ್ಕೆ ಯಾರಿಗೂ ಹಕ್ಕಿಲ್ಲ ಎಂದು ಹೇಳಿದ್ರು.
ಇದನ್ನೂ ಓದಿ : ಗಾಂಧೀಜಿ ಹಾಕಿಕೊಟ್ಟ ಮಾರ್ಗದಲ್ಲಿ ನಡೆಯೋಣ: ಶಾಸಕ ಆಸೀಫ್ ಸೇಠ್