ಕೋಲಾರ: ವಿವಾಹಿತನೊಬ್ಬ 16 ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿ ಬಳಿಕ ಕೊಲೆ ಮಾಡಿ ಪರಾರಿಯಾಗಿರುವ ಬೆಚ್ಚಿಬೀಳಿಸುವ ಪ್ರಕರಣ ಜಿಲ್ಲೆಯ ಮಾಲೂರು ತಾಲೂಕಿನ ಮಾಸ್ತಿ ಹೋಬಳಿ ವ್ಯಾಪ್ತಿಯಲ್ಲಿ ನಡೆದಿದೆ.
ಪ್ರಕರಣ ಸಂಬಂಧ ಬಾಲಕಿ ತಂದೆ ದೂರು ನೀಡಿದ್ದು, ಪೊಲೀಸರು ಆರೋಪಿ ಮಂಜುನಾಥ್ (27) ಪತ್ತೆ ಕಾರ್ಯ ಆರಂಭಿಸಿದ್ದಾರೆ. ಸಂತ್ರಸ್ತ ಬಾಲಕಿಯ ತಂದೆ ಮತ್ತು ತಾಯಿ 2 ದಿನದ ಹಿಂದೆ ತಮಿಳುನಾಡಿಗೆ ಹೋಗಿದ್ದರು. ಈ ವೇಳೆ ಬಾಲಕಿ ಮತ್ತು ಆಕೆಯ ತಂಗಿ ಮಾತ್ರ ಮನೆಯಲ್ಲಿದ್ದರು. ಈ ಸಂಗತಿ ತಿಳಿದಿದ್ದ ಆರೋಪಿ ಮಂಜುನಾಥ್ ಬೆಳಗ್ಗೆ ಏಕಾಏಕಿ ಮನೆಯೊಳಗೆ ನುಗ್ಗಿ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದಾನೆ. ಬಾಲಕಿ ರಕ್ಷಣೆಗಾಗಿ ಚೀರಿಕೊಂಡಾಗ ಆರೋಪಿ ಆಕೆಯ ಕುತ್ತಿಗೆಗೆ ಸೀರೆ ಬಿಗಿದು ಕೊಲೆ ಮಾಡಿ ನೇಣು ಹಾಕಿದ್ದಾನೆ. ಬಳಿಕ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಮೃತಳ ಸಂಬಂಧಿಕರು ಆರೋಪಿಸಿದ್ದಾರೆ.
ಘಟನೆ ಸಂದರ್ಭ ಪಕ್ಕದಲ್ಲಿಯೇ ಇದ್ದ ಚಿಕ್ಕಮ್ಮನ ಮನೆಯಲ್ಲಿದ್ದ ಸಂತ್ರಸ್ತ ಬಾಲಕಿಯ ತಂಗಿ ಮಂಜುನಾಥ್ ಓಡಿ ಹೋಗುವುದನ್ನು ನೋಡಿದ್ದಾಳೆ. ಆಕೆಯ ಚಿಕ್ಕಮ್ಮ ಸಹ ಆತನನ್ನು ನೋಡಿದ್ದಾರೆ ಎಂದು ತಿಳಿದುಬಂದಿದೆ.
ಮಕ್ಕಳ ವಿರುದ್ಧದ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆ ಹಾಗೂ ಕೊಲೆ ಆರೋಪದಡಿ ಮಂಜುನಾಥ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.