ಕೊಲಾರ: ರೈತರು ಕೆ.ಸಿ.ವ್ಯಾಲಿ ನೀರು ಕದಿಯುವುದನ್ನ ನಿಲ್ಲಿಸುವುದಕ್ಕೆ ಟಾಸ್ಕ್ ಫೋರ್ಸ್ ಸಮಿತಿ ನಿಯೋಜನೆ ಮಾಡಲಾಗಿದೆ ಎಂದು ಕೋಲಾರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಚ್.ನಾಗೇಶ್ ಹೇಳಿದ್ದಾರೆ.
ಇಂದು ಕೋಲಾರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕೆ.ಸಿ.ವ್ಯಾಲಿ ನೀರಿಗೆ ಸಂಬಂಧಿಸಿದಂತೆ, ಜಿಲ್ಲಾ ಜನಪ್ರತಿನಿದಿಗಳು ಹಾಗೂ ಅಧಿಕಾರಿಗಳನ್ನ ಸಭೆಯನ್ನ ಕರೆಯಲಾಗಿತ್ತು. ಸಭೆ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೆ.ಸಿ.ವ್ಯಾಲಿ ನೀರನ್ನ ಕೆಲ ರೈತರು ಪಂಪ್ ಸೆಟ್ ಹಾಗೂ ಮೋಟರ್ಗಳನ್ನ ಬಳಕೆ ಮಾಡಿಕೊಂಡು ನೀರನ್ನ ಕದಿಯಲಾಗುತ್ತಿದ್ದು, ಇದನ್ನ ತಡೆಗಟ್ಟುವ ನಿಟ್ಟಿನಲ್ಲಿ, ನಿವೃತ್ತ ಯೋಧರನ್ನೊಳಗೊಂಡ ಟಾಸ್ಕ್ ಫೋರ್ಸ್ ಕಮಿಟಿಯನ್ನ ನಿಯೋಜನೆ ಮಾಡಿರುವುದಾಗಿ ತಿಳಿಸಿದರು.
ಇನ್ನು ಕೋಲಾರ ಜಿಲ್ಲೆಯ 126 ಕೆರೆಗಳಿಗೆ ಹರಿಸುವ ಕೆ.ಸಿ.ವ್ಯಾಲಿ ಯೋಜನೆಯ ನೀರಿನ ಒಳಹರಿವು ಕಡಿಮೆಯಾಗಿರುವ ಪರಿಣಾಮ ಎಲ್ಲ ಕೆರೆಗಳಿಗೆ ನೀರು ತುಂಬಿಸುವುದಕ್ಕೆ ವಿಳಂಬವಾಗುತ್ತಿದೆ ಎಂದರು. ಅಲ್ಲದೇ ಬೆಂಗಳೂರಿನ ಕೋರಮಂಗಲ ಚಲ್ಲಘಟ್ಟ ಸಂಸ್ಕರಿಸಿದ 440 ಎಂ.ಎಲ್.ಡಿ ನೀರು ಕೋಲಾರ ಜಿಲ್ಲೆಗೆ ಹರಿಯಬೇಕಿತ್ತು. ಆದರೆ, 230 ಎಂ.ಎಲ್.ಡಿ. ನೀರು ಮಾತ್ರ ಬರುತ್ತಿದೆ ಎಂದ ಅವರು, ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳನ್ನ ಕೇಳಿದರೆ, ಪೈಪ್ ಲೈನ್ ಡ್ಯಾಮೇಜ್ ಹಾಗೂ ಪೈಪ್ ಗಳಲ್ಲಿ ಕಸ ತುಂಬಿಕೊಂಡಿರುವ ಪರಿಣಾಮ ನೀರಿನ ಒಳಹರಿವು ಕಡಿಮೆಯಾಗುತ್ತಿದೆ ಎಂದು ಕಾರಣ ನೀಡುತ್ತಿದ್ದು, ಈ ಕುರಿತು ಕ್ರಮಕೈಗೊಳ್ಳುವುದಾಗಿ ಹೇಳಿದರು.
ಇನ್ನು ಇದುವರೆಗೂ 90 ಚೆಕ್‌ಡ್ಯಾಂ ಗಳು ಹಾಗೂ 26 ಕೆರೆಗಳು ಮಾತ್ರ ತುಂಬಿದ್ದು, ಎರಡು ದಿನಗಳೊಳಗೆ ಬಿ.ಡಬ್ಲೂ.ಎಸ್.ಎಸ್.ಬಿ ಯವರೊಂದಿಗೆ ಸಭೆ ನಡೆಸಲಾಗುವುದು ಎಂದು ತಿಳಿಸಿದರು. ಅಲ್ಲದೇ ಬಿ.ಡಬ್ಲೂ.ಎಸ್.ಎಸ್.ಬಿ ಅಧಿಕಾರಿಗಳು ಸರಿಯಾಗಿ ಸ್ಪಂದಿಸದೇ ಹೋದರೆ ನೇರ ಮುಖ್ಯಮಂತ್ರಿಗಳೊಂದಿಗೆ ಮಾತುಕತೆ ನಡೆಸಿ ನೀರಿನ ಒಳ ಹರಿವು ಹೆಚ್ಚಿಸಲಾಗುವುದು ಎಂದರು. ಅಲ್ಲದೇ ಜಿಲ್ಲೆಯ ರೈತರು ನೀರನ್ನ ಕದಿಯದೇ ಎಲ್ಲ ಕೆರೆಗಳು ತುಂಬಿಸುವ ನಿಟ್ಟಿನಲ್ಲಿ ಸಹಕಾರ ನೀಡಬೇಕೆಂದು ಮನವಿ ಮಾಡಿದರು.