ಕೋಲಾರ : ಎಂ ವಿ ಕೃಷ್ಣಪ್ಪ ಅವರ ನೆನಪಿನಾರ್ಥವಾಗಿ ನಿರ್ಮಾಣವಾಗುತ್ತಿದ್ದ ಮೆಗಾ ಡೈರಿಗೆ ತಡೆಯಾಜ್ಞೆ ನೀಡಿರುವುದನ್ನು ಪ್ರಶ್ನಿಸಿ ಸಚಿವ ಸುಧಾಕರ್ ಅವರನ್ನು ಶಾಸಕ ಕೆ ವೈ ನಂಜೇಗೌಡ ತರಾಟೆ ತೆಗೆದುಕೊಂಡಿದ್ದಾರೆ.
ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ವೈದ್ಯಕೀಯ ಸಚಿವರಾದ ಡಾ. ಸುಧಾಕರ್ ರಾಜಕಾರಣದಲ್ಲಿ ಹಿರಿಯರು, ಮಂತ್ರಿಗಳೂ ಸಹ ಆಗಿದ್ದಾರೆ. ಕೋಲಾರದಲ್ಲಿ ನಿರ್ಮಾಣವಾಗುತ್ತಿರುವ 200 ಕೋಟಿ ವೆಚ್ಚದ ಎಂವಿಕೆ ಡೈರಿಗೆ ತಡೆಯಾಜ್ಞೆ ತಂದಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದ್ರು.
ಕೋಲಾರದ ಸಂಸದರು, ಸಚಿವರು, ಶಾಸಕರು ಹಾಗೂ ಕೋಚಿಮುಲ್‌ನ ಕಾರ್ಯಕಾರಿ ಮಂಡಳಿಯವರನ್ನು ಪರಿಗಣನೆಗೆ ತೆಗೆದುಕೊಳ್ಳದೆ ಏಕಾಏಕಿ ಈ ನಿರ್ಧಾರ ತೆಗೆದುಕೊಂಡಿದ್ದಾರೆಂದು ದೂರಿದರು. ಈಗಾಗಲೇ ಚಿಕ್ಕಬಳ್ಳಾಪುರದಲ್ಲಿ ಮೆಗಾ ಡೈರಿ ನಿರ್ಮಾಣವಾಗಿದೆ. ಜೊತೆಗೆ ಚಿಲ್ಲಿಂಗ್ ಸೆಂಟರ್‌ಗಳೂ ಸಹ ನಿರ್ಮಾಣವಾಗಿವೆ, ಹೀಗಿರುವಾಗ ಚಿಕ್ಕಬಳ್ಳಾಪರವನ್ನು ಇಬ್ಭಾಗ ಮಾಡಿಕೊಳ್ಳುವ ನಿಟ್ಟಿನಲ್ಲಿ ಕೋಲಾರದಲ್ಲಿ ನಿರ್ಮಾಣವಾಗುತ್ತಿರುವ ಎಂವಿಕೆ ಡೈರಿಗೆ ತಡೆ ಮಾಡುವ ಉದ್ದೇಶ ಏನಿತ್ತು ಎಂದು ತಮ್ಮ ಅಸಮಾಧಾನ ಹೊರ ಹಾಕಿದ್ರು.
ಎಂವಿಕೆ ಡೈರಿ ನಿರ್ಮಾಣದ ತಡೆಯಾಜ್ಞೆ ಕೂಡಲೇ ಹಿಂಪಡೆಯದಿದ್ದರೆ ಜಿಲ್ಲೆಯಾದ್ಯಂತ ರೈತರ ಹಾಗೂ ಹಾಲು ಉತ್ಪಾದಕರ ಜೊತೆ ಸೇರಿ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.