ಕೋಲಾರ : ಜಿಲ್ಲೆಯ ಮಾಲೂರು ಪುರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಚುನಾವಣೆ ಕಣ ರಂಗೇರಿದೆ. ಸಂಸದ ಎಸ್ ಮುನಿಸ್ವಾಮಿ ಹಾಗೂ ಶಾಸಕ ನಂಜೇಗೌಡ ನಡುವಿನ ಜಟಾಪಟಿ ಜೋರಾಗಿದೆ.
ಪುರಸಭೆ ಅಧ್ಯಕ್ಷ ಸ್ಥಾನ ಚುನಾವಣೆ ಹಿನ್ನೆಲೆ ಮಾಲೂರು ಶಾಸಕ ಕೆ ವೈ ನಂಜೇಗೌಡ ಪುರಸಭೆ ಸದಸ್ಯರೊಂದಿಗೆ ಮಾತನಾಡಿರುವ ಆಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಕುರಿತು ಪ್ರತಿಕ್ರಿಯಿಸಿದ ಅವರು, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಆಡಿಯೋ ನನ್ನದಲ್ಲ. ಬದಲಾಗಿ ನನ್ನ ಧ್ವನಿಯನ್ನ ಮಿಮಿಕ್ರಿ ಮಾಡಿದ್ದಾರೆಂದು ಆರೋಪಿಸಿದ್ದಾರೆ.
ಅಲ್ಲದೆ ನಾನು ಯಾವುದೇ ಪುರಸಭೆ ಸದಸ್ಯರೊಂದಿಗೆ ಮಾತನಾಡಿ ಬಿಜೆಪಿ ರೀತಿಯಲ್ಲಿ ಕುದುರೆ ವ್ಯಾಪಾರ ಮಾಡಿಲ್ಲ ಎಂದ ಅವರು, ನಮ್ಮಲ್ಲಿ ಅಧ್ಯಕ್ಷರಾಗಲು ಬೇಕಾಗಿರುವ ಸದಸ್ಯರ ಸಂಖ್ಯಾಬಲ ಹೊಂದಿದ್ದೇವೆ ಎಂದರು.
ಆಡಿಯೋ ನನ್ನದಾಗಿದ್ರೇ ತಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವೆ ಎಂದು ಸವಾಲು ಹಾಕಿದ್ರು. ಅಲ್ಲದೆ ಕೋಲಾರ ಜಿಲ್ಲಾಧಿಕಾರಿ ಜನಪ್ರತಿನಿಧಿಗಳ ಕೈಗೊಂಬೆಯಂತೆ ಕೆಲಸ ಮಾಡುತ್ತಿದ್ದಾರೆ. ಅಧಿಕಾರಿಗಳನ್ನ ಬಳಸಿಕೊಂಡು ಚುನಾವಣೆ ಮುಂದೂಡುವ ಕೆಲಸ ಬಿಜೆಪಿ ಮಾಡುತ್ತಿದ್ದು, ಚುನಾವಣೆ ಮುಂದೂಡಿದ್ರೇ ಜಿಲ್ಲೆಯಲ್ಲಿ ಉಗ್ರ ಹೋರಾಟ, ಕಾನೂನು ಸಮರ ಮಾಡುವ ಎಚ್ಚರಿಕೆ ನೀಡಿದ್ರು.
ಇದೇ ವೇಳೆ ಈ ಬಗ್ಗೆ ಸಂಸದ ಎಸ್.ಮುನಿಸ್ವಾಮಿ ಅವರು ಪ್ರತಿಕ್ರಿಯಿಸಿದ್ದು, ಶಾಸಕ ನಂಜೇಗೌಡ ಪುರಸಭೆ ಸದಸ್ಯರ ಕುದುರೆ ವ್ಯಾಪಾರ ಮಾಡುತ್ತಿರುವುದು ಸರಿಯಲ್ಲ. ಇದೊಂದು ಪ್ರಜಾಪ್ರಭುತ್ವದ ಕಗ್ಗೊಲೆ ಎಂದರು. ಅಲ್ಲದೆ ನಂಜೇಗೌಡ ಅವರು ವಾಮಮಾರ್ಗದಲ್ಲಿ ದುಡ್ಡು ಮಾಡಿದ್ದಾರೆ. ಅದನ್ನ ದುರ್ಬಳಕೆ ಮಾಡಿಕೊಂಡು, ಗೆದ್ದಿರುವ ಪುರಸಭಾ ಸದಸ್ಯರ ವ್ಯಾಪಾರ ಮಾಡಲು ಮುಂದಾಗಿದ್ದಾರೆ ಎಂದರು.
ಆಡಿಯೋ ಕುರಿತು ತನಿಖೆಯಾಗಬೇಕು, ತನಿಖೆ ನಡೆಸಿ ಕಾನೂನು ರೀತಿ ಕ್ರಮ ಜರುಗಿಸಬೇಕು. ಸುಳ್ಳು ಹೇಳುವುದು, ಡ್ರಾಮಾ ಮಾಡುವುದನ್ನ ಬಿಟ್ಟು, ನಮ್ಮ ಬಿಜೆಪಿ ಪಾರ್ಟಿಯಿಂದ ಗೆದ್ದ ಅಭ್ಯರ್ಥಿಯನ್ನ ಕಳಿಸಿಕೊಡಿ ಎಂದರು.