ಕೋಲಾರ: ಕಾಡಿನಿಂದ ನಾಡಿಗೆ ಬಂದಿದ್ದ ಪಂಗೋಲಿನ್ (ಚಿಪ್ಪುಹಂದಿ) ಅನ್ನು ಕಿಡಿಗೇಡಿಗಳು ಹತ್ಯೆಗೈದು ವಿಕೃತಿ ಮೆರೆದಿರುವ ಘಟನೆ ಕೋಲಾರದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ವಸತಿ ಪ್ರದೇಶಕ್ಕೆ ದಾರಿ ತಪ್ಪಿ ಬಂದ ಪೆಂಗೋಲಿನ್ ಅನ್ನು ಬಡಿದು ಹತ್ಯೆ ಮಾಡಲಾಗಿದೆ. ನಗರದ ಹೊರವಲಯದಲ್ಲಿನ ಅಂತರಗಂಗೆ ಬೆಟ್ಟದಿಂದ ಷಹಿನ್ ಷಾ ನಗರಕ್ಕೆ ಬಂದ ಪಂಗೋಲಿನ್ ದುರುಳರ ಕೈಗೆ ಸಿಕ್ಕಿ ಸಾವನ್ನಪ್ಪಿದೆ.
ಕೋಲಾರ ನಗರದಾದ್ಯಂತ ಕಳೆದ ವಾರ ಜಡಿ ಮಳೆ ಸುರಿದಿದೆ. ರಾತ್ರಿ 10 ಗಂಟೆ ವೇಳೆಯಲ್ಲಿ ಅಂತರಗಂಗೆ ಬೆಟ್ಟದಿಂದ ಭಾರಿ ಗಾತ್ರದ ಪಂಗೋಲಿನ್ ತಪ್ಪಲಿನಲ್ಲಿರುವ ಷಹಿನ್ ಷಾ ನಗರಕ್ಕೆ ದಿಕ್ಕು ತಪ್ಪಿ ಬಂದಿದೆ. ಈ ಸಂದರ್ಭದಲ್ಲಿ ಅಲ್ಲಿದ್ದ ಕೆಲವು ಕಿಡಿಗೇಡಿಗಳು ಪಂಗೋಲಿನ್ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಹತ್ಯೆ ಮಾಡಿದ್ದಲ್ಲದೆ ವಿಕೃತಿ ಮೆರೆದಿದ್ದಾರೆ.
ಪೆಂಗೋಲಿನ್ ಮೃತ ದೇಹವನ್ನು ಕಬ್ಬಿಣದ ರಾಡ್ಗೆ ಸಿಕ್ಕಿಸಿಕೊಂಡು ಕಿಡಿಗೇಡಿಗಳು ಮೆರವಣಿಗೆ ನಡೆಸಿ ವಿಕೃತಿ ಮೆರೆದಿರುವ ವಿಡಿಯೋ ಮತ್ತು ಪೋಟೋಗಳು ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿವೆ. ಇದು ಪ್ರಾಣಿಪ್ರಿಯರ ಆಕ್ರೋಶಕ್ಕೆ ಕಾರಣವಾಗಿದ್ದು, ಪಂಗೋಲಿನ್ ಹತ್ಯೆಗೈದಿರುವ ಕಿಡಿಗೇಡಿಗಳ ಪತ್ತೆಗಾಗಿ ಅರಣ್ಯ ಇಲಾಖೆ ಸಿಬ್ಬಂದಿ ಮುಂದಾಗಿದ್ದಾರೆ.