ಕೋಲಾರ: ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆ ಕಾಂಗ್ರೆಸ್ ನಿನ್ನೆ(ಶನಿವಾರ) ತನ್ನ 3ನೇ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ. 43 ಅಭ್ಯರ್ಥಿಗಳ ಪಟ್ಟಿಯಲ್ಲಿ ಕೋಲಾರ ವಿಧಾನಸಭಾ ಕ್ಷೇತ್ರದ ಟಿಕೆಟ್ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಬದಲಿಗೆ ಕೊತ್ತೂರು ಮಂಜುನಾಥ್ ಅವರಿಗೆ ಕಾಂಗ್ರೆಸ್ ಹೈಕಮಾಂಡ್ ಘೋಷಣೆ ಮಾಡಿದೆ. ಈ ಮೂಲಕ ಕಾಂಗ್ರೆಸ್‌ನ ಕೋಲಾರ ಅಭ್ಯರ್ಥಿಯ ಕುತೂಹಲಕ್ಕೆ ತೆರೆ ಎಳೆದಿದೆ. ಆದರೆ ಇದು ಕಾರ್ಯಕರ್ತರ ಹಾಗೂ ಕೆಲ ಮುಖಂಡರ ಅಸಮಧಾನಕ್ಕೆ ಕಾರಣವಾಗಿದೆ.
ಕಳೆದ 6 ತಿಂಗಳಿನಿಂದ ಕೋಲಾರ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪರ್ಧಿಸಲಿದ್ದಾರೆ ಎಂದು ಜಗಜ್ಜಾಹಿರಾಗಿತ್ತು. ಅದರಂತೆ ಸಿದ್ದರಾಮಯ್ಯ ಸಹ ಕೋಲಾರದಲ್ಲಿ ಐದಾರು ಬಾರಿ ಪ್ರವಾಸ ಕೈಗೊಂಡು ಮುಖಂಡರೊಂದಿಗೆ ಮಾತುಕತೆಯನ್ನೂ ನಡೆಸಿದ್ದರು. ಆದರೆ ಕೊನೆ ಗಳಿಗೆಯಲ್ಲಿ ಕಾಂಗ್ರೆಸ್ ಹೈಕಮಾಂಡ್ ನೀಡಿದ ಸೂಚನೆಯಂತೆ ವರುಣಾದಲ್ಲಿ ಮಾತ್ರ ಸಿದ್ದರಾಮಯ್ಯ ಸ್ಪರ್ಧೆಗೆ ಮುಂದಾಗಿದ್ದಾರೆ.
ಸಿದ್ದರಾಮಯ್ಯರನ್ನೇ ಕಣಕ್ಕಿಳಿಸಿ: "ಸಿದ್ದರಾಮಯ್ಯ ಅವರೇ ಕೋಲಾರ ಕ್ಷೇತ್ರದ ಅಭ್ಯರ್ಥಿಯಾಗಬೇಕು. ಇನ್ನೂ ಅವಕಾಶವಿದೆ. ಅವರನ್ನೇ ಕಣಕ್ಕಿಳಿಸುವಂತೆ ನಾನು ಮುಖಂಡರಿಗೆ ಮನವಿ ಮಾಡುತ್ತೇನೆ" ಎಂದು ಕೋಲಾರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೊತ್ತೂರು ಮಂಜುನಾಥ್ ತಿಳಿಸಿದ್ದಾರೆ. ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ನಾನು ಕೋಲಾರ ಕ್ಷೇತ್ರ ಬೇಕೆಂದು ಕೇಳಿಲ್ಲ. ಆಕಾಂಕ್ಷಿಯಾಗಿ ಅರ್ಜಿ ಸಲ್ಲಿಸಿಲ್ಲ. ಪಟ್ಟಿ ಬಿಡುಗಡೆಯಾದ ನಂತರ ಗಮನಕ್ಕೆ ಬಂದಿದೆ. ಅರ್ಜಿ ಸಲ್ಲಿಸದಿದ್ದರೂ ನನಗೆ ಟಿಕೆಟ್ ಘೋಷಣೆ ಮಾಡಿರುವುದು ಆಶ್ಚರ್ಯ ತಂದಿದೆ. ನಾನೊಬ್ಬ ಉತ್ತಮ ಸಂಘಟನಾಕಾರ. ಮುಳಬಾಗಿಲು ಕ್ಷೇತ್ರದಲ್ಲಿ ಅಭಿವೃದ್ಧಿ ಮಾಡಿದ್ದೇನೆ ಎಂಬುದನ್ನು ಗಮನಿಸಿ ಟಿಕೆಟ್ ಘೋಷಣೆ ಮಾಡಿರಬಹುದು ಎಂದರು.
ಈಗಲೂ ಕೋಲಾರ ಟಿಕೆಟ್ ಸಿದ್ದರಾಮಯ್ಯ ಅವರಿಗೆ ನೀಡಬೇಕು ಎಂದು ಹೈಕಮಾಂಡ್ನ್ನು ಒತ್ತಾಯಿಸುತ್ತಿದ್ದೇನೆ. ಸಿದ್ದರಾಮಯ್ಯ ಅವರು ಕೋಲಾರದಿಂದ ಸ್ಪರ್ಧಿಸಿದರೆ ಸಂಪೂರ್ಣವಾಗಿ ಸ್ವಾಗತಿಸುತ್ತೇನೆ. ಹೈಕಮಾಂಡ್ ತಮಗೆ ಟಿಕೆಟ್ ನೀಡಿರುವುದಕ್ಕೆ ಬದ್ಧನಾಗಿರುತ್ತೇನೆ. ಜಿಲ್ಲೆಯ ಹಿರಿಯ ಮುಖಂಡರಾದ ರಮೇಶ್ ಕುಮಾರ್, ನಜೀರ್ ಅಹ್ಮದ್, ಅನಿಲ್ ಕುಮಾರ್, ವಿ.ಆರ್. ಸುದರ್ಶನ್ ಮತ್ತಿತರರ ಒಪ್ಪಿಗೆ ಇದ್ದಲ್ಲಿ ಕೋಲಾರದಿಂದ ಸ್ಪರ್ಧಿಸಲು ತಾವು ಸಿದ್ಧ ಎಂದು ಮಂಜುನಾಥ್ ಸ್ಪಷ್ಟಪಡಿಸಿದರು.
ಭುಗಿಲೆದ್ದ ಕಾರ್ಯಕರ್ತರ ಅಸಮಾಧಾನ: ಕೋಲಾರದಿಂದ ಸಿದ್ದರಾಮಯ್ಯ ಸ್ಪರ್ಧೆ ನಿರಾಕರಣೆ ಹಿನ್ನೆಲೆ ಈಗಾಗಲೇ ಕಾಂಗ್ರೆಸ್ ಮೂರನೇ ಪಟ್ಟಿಯಲ್ಲಿ ಕೊತ್ತೂರು ಮಂಜುನಾಥ್ ಹೆಸರನ್ನು ಘೋಷಣೆ ಮಾಡಿದೆ. ಇದು ಅಸಮಾಧಾನಕ್ಕೆ ಕಾರಣವಾಗಿದೆ. ಜೈ ಭಾರತ್ ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿ ಮುಂದೆ ಕಾರ್ಯಕರ್ತರ ಜತೆ ಹಾಲಿ ಶಾಸಕರು ಇಂದು ಆಕ್ರೋಶ ಹೊರಹಾಕುವ ಸಾಧ್ಯತೆಯಿದೆ.
ರಮೇಶ್ ಕುಮಾರ್ ಜತೆ ಮಾತುಕತೆ: ಇತ್ತ ಕೋಲಾರ ಕ್ಷೇತ್ರದಿಂದ ಸಿದ್ದರಾಮಯ್ಯ ಸ್ಪರ್ಧೆ ನಿರಾಕರಣೆ ಹಿನ್ನೆಲೆ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಮುನಿಸಿಕೊಂಡಿದ್ದು, ಕಾಂಗ್ರೆಸ್ ಪಕ್ಷದಿಂದ ನಾಮಪತ್ರ ಸಲ್ಲಿಸುವುದಿಲ್ಲವೆಂದು ಪಟ್ಟು ಹಿಡಿದಿದ್ದರು. ಹೀಗಾಗಿ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಮತ್ತು ಬೈರತಿ ಸುರೇಶ್ ಅವರು ಶ್ರೀನಿವಾಸಪುರ ತಾಲೂಕಿನ ಅಡ್ಡಗಲ್ ಗ್ರಾಮಕ್ಕೆ ಹೆಲಿಕಾಪ್ಟರ್ ಮೂಲಕ ಆಗಮಿಸಿ ಸುಮಾರು 2 ಗಂಟೆಗಳ ಕಾಲ ರಮೇಶ್ ಕುಮಾರ್ ಜತೆ ಪ್ರತ್ಯೇಕವಾಗಿ ಮಾತುಕತೆ ನಡೆಸಿದರು. ನಮ್ಮಲ್ಲಿ ಯಾವುದೇ ರೀತಿಯ ಮುನಿಸು ಇಲ್ಲ, ಕೋಪವೂ ಇಲ್ಲ. ರಾಹುಲ್ ಗಾಂಧಿ ಕಾರ್ಯಕ್ರಮದ ಕುರಿತು ಚರ್ಚೆ ಮಾಡಲು ಬಂದಿರುವುದಾಗಿ ತಿಳಿಸಿದರು.
ಅಲ್ಪಸಂಖ್ಯಾತರರಿಗೆ ಟಿಕೆಟ್ ನೀಡುವಂತೆ ಆಗ್ರಹ: ಇನ್ನು ಕೋಲಾರದಲ್ಲಿ ಇಂದು ನಡೆಯವ ರಾಹುಲ್ ಗಾಂಧಿ ಅವರ ಜೈ ಭಾರತ್ ಹಾಗೂ ಸತ್ಯಮೇವ ಜಯತೆ ಸಮಾವೇಶ ಪೂರ್ವ ಸಿದ್ದತೆ ವೀಕ್ಷಣೆಗೆ ಆಗಮಿಸಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕೋಲಾರದಲ್ಲಿರುವಾಗಲೇ ಕಾಂಗ್ರೆಸ್‌ನ 3ನೇ ಪಟ್ಟೆ ಬಿಡುಗಡೆಯಾಗಿತ್ತು. ಪಟ್ಟಿಯಲ್ಲಿ ಸಿದ್ದರಾಮಯ್ಯ ಹೆಸರು ಘೋಷಣೆ ಮಾಡುವ ಸಾಧ್ಯತೆ ಇತ್ತು. ಆದ್ರೆ ಕೊನೆ ಗಳಿಗೆಯಲ್ಲಿ ಮಾಜಿ ಶಾಸಕ ಕೊತ್ತೂರು ಮಂಜುನಾಥ್ ಹೆಸರು ಘೋಷಣೆ ಮಾಡಲಾಗಿದೆ. ಇದು ಸಿದ್ದರಾಮಯ್ಯ ಸ್ಫರ್ಧಿಸಲಿದ್ದಾರೆ ಎಂದು ಸಾಕಷ್ಟು ನಿರೀಕ್ಷೆ ಹಾಗೂ ಭರವಸೆಗಳನ್ನ ಹೊಂದಿದ್ದ ಜಿಲ್ಲಾ ಕಾಂಗ್ರೆಸ್ ಮುಖಂಡರ ಅಸಮಾಧಾನಕ್ಕೆ ಕಾರಣವಾಗಿದೆ. ಡಿಕೆಶಿ ಎದುರೇ ಕೆಲ ಮುಸ್ಲಿಂ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.
ಇಷ್ಟು ದಿನ ಸಿದ್ದರಾಮಯ್ಯ ಹೆಸರು ಹೇಳಿ ನಮಗೆ ಮೋಸ ಮಾಡಲಾಗಿದೆ. ಒಂದು ವೇಳೆ ಸಿದ್ದರಾಮಯ್ಯಗೆ ಟಿಕೆಟ್ ಕೊಡದಿದ್ದರೆ ಅಲ್ಪಸಂಖ್ಯಾತರರಿಗೆ ಟಿಕೆಟ್ ನೀಡಬೇಕು. ಇಲ್ಲದಿದ್ದರೆ ಬಂಡಾಯ ಅಭ್ಯರ್ಥಿಯನ್ನಾಗಿ ಮುಸ್ಲಿಂ ನಾಯಕನನ್ನ ಕಣಕ್ಕೆ ಇಳಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ಅಲ್ಲದೇ ಕಾಂಗ್ರೆಸ್ ಕಚೇರಿಯಲ್ಲಿ ಸಭೆ ಸೇರಿದ ಮುಸ್ಲಿಂ ಮುಖಂಡರು ಕಚೇರಿಯ ಚೇರ್ಗಳನ್ನ ಒಡೆದು ದಾಂಧಲೆ ಮಾಡಿದರು. ಇದೆಲ್ಲಾ ಬೆಳವಣಿಗೆಗಳ ಬಗ್ಗೆ ಪ್ರತಿಕ್ರಿಯಿಸಿದ ಅಭ್ಯರ್ಥಿ ಕೊತ್ತೂರು ಮಂಜುನಾಥ್ ಜಿಲ್ಲೆಯ ಹೈ ಕಮಾಂಡ್ ಒಪ್ಪಿದ್ರೆ ಮಾತ್ರ ನಾನು ಕೋಲಾರ ಸ್ಪರ್ಧೆ ಮಾಡುವೆ. ಸ್ಥಳೀಯ ಕೋಲಾರದ ಹೈಕಮಾಂಡ್ ದೊಡ್ಡದು. ಇಲ್ಲಿನ ಮುಖಂಡರಾದ ಕೆ.ಶ್ರೀನಿವಾಸಗೌಡ, ನಸೀರ್ ಅಹ್ಮದ್, ವಿ.ಆರ್.ಸುದರ್ಶನ್, ಎಂ.ಎಲ್.ಅನಿಲ್‍ಕುಮಾರ್, ಅಲ್ಪಸಂಖ್ಯಾತ ಮುಖಂಡರು, ಹಿಂದುಳಿದ ಸಮುದಾಯಗಳ ಮುಖಂಡರು ನನಗೆ ಹೈಕಮಾಂಡ್. ಇವರ ಬಳಿ ಚರ್ಚಿಸದೆ ನಾನು ನಾಮಪತ್ರ ಸಲ್ಲಿಸುವುದಿಲ್ಲ ಎಂದು ಹೇಳಿದ್ದಾರೆ.