ಕೋಲಾರ: ಕೋಲಾರದ ಬಾಂಬ್ ನಿಷ್ಕ್ರಿಯ ದಳದಲ್ಲಿ ಕಳೆದ ಐದು ವರ್ಷಗಳಿಂದ ಕೆಲಸ ಮಾಡುತ್ತಿದ್ದ ಪೊಲೀಸ್ ಶ್ವಾನವೊಂದು ಇಂದು ಮೃತಪಟ್ಟಿದೆ.
27 ಸೆಪ್ಟಂಬರ್ 2015ರಲ್ಲಿ ಜನಿಸಿದ್ದ ತೇಜಸ್ ಹೆಸರಿನ ಈ ನಾಯಿ ಕಳೆದ ಎರಡು ವರ್ಷಗಳಿಂದ ಕ್ಯಾನ್ಸರ್ ರೋಗದಿಂದ ಬಳಲುತ್ತಿತ್ತು. ನಾಯಿಗೆ ಸೂಕ್ತ ಚಿಕಿತ್ಸೆಯನ್ನು ನೀಡಿದ್ದ ಪರಿಣಾಮ ಎರಡು ವರ್ಷಗಳಿಂದ ರೋಗವಿದ್ದರೂ ಉತ್ತಮ ಕೆಲಸ ಮಾಡಿ ಇಲಾಖೆಯಲ್ಲಿ ಹೆಚ್ಚು ಜನಪ್ರಿಯತೆ ಗಳಿಸಿತ್ತು.
ರಾಜ್ಯಾದ್ಯಂತ ಹಲವೆಡೆ ಕೆಲಸ ಮಾಡಿರುವ ಈ ಶ್ವಾನ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಸುಮಾರು ಐಪಿಎಲ್ ಮ್ಯಾಚ್ಗಳ ಸಂದರ್ಭದಲ್ಲಿ ಬಾಂಬ್ ನಿಷ್ಕ್ರಿಯ ದಳದ ಜೊತೆಗೆ ಕೆಲಸ ಮಾಡಿತ್ತು. ಅಷ್ಟೇ ಅಲ್ಲ, ಪ್ರಧಾನಮಂತ್ರಿಗಳು, ಹಲವು ಮುಖ್ಯಮಂತ್ರಿಗಳ ಕಾರ್ಯಕ್ರಮಗಳಲ್ಲಿ ಈ ತೇಜಸ್ ಶ್ವಾನ ಕೆಲಸ ಮಾಡಿತ್ತು.
ತೇಜಸ್ ಇಂದು ಮುಂಜಾನೆ ಕೋಲಾರದ ಸಶಸ್ತ್ರ ಮೀಸಲು ಪಡೆ ಕಚೇರಿಯಲ್ಲಿ ಮೃತಪಟ್ಟಿದೆ. ಶ್ವಾನಕ್ಕೆ ಸಕಲ ಸರ್ಕಾರಿ ಗೌರವಗಳನ್ನು ಸಲ್ಲಿಸಿ ಅಂತ್ಯ ಸಂಸ್ಕಾರ ಮಾಡಲಾಗಿದೆ. ಮೂರು ಸುತ್ತು ಕುಶಾಲು ತೋಪು ಸಿಡಿಸಿ ಪೊಲೀಸ್ ಸಿಬ್ಬಂದಿ ಮೃತ ಶ್ವಾನಕ್ಕೆ ಗೌರವ ನಮನ ಸಲ್ಲಿಸಿದ್ದಾರೆ.