ಕೋಲಾರ: ಗಾಂಧಿ ನಗರದಲ್ಲಿ ಮತ್ತೊಂದು ಕೊರೊನಾ ಸೋಂಕು ಪ್ರಕರಣ ಪತ್ತೆಯಾಗುವ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 7ಕ್ಕೆ ಏರಿಕೆಯಾಗಿದೆ.
ಕೋಲಾರದ ಗಾಂಧಿ ನಗರದಲ್ಲಿ ಮಂಡ್ಯ ಮೂಲದ ವ್ಯಕ್ತಿಗೆ ಕೊರೊನಾ ಸೋಂಕು ದೃಢವಾಗಿದೆ. ಕೋಲಾರದ ನ್ಯಾಯಾಲಯದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಈತ ಲಾಕ್ಡೌನ್ ಹಿನ್ನೆಲೆ ಕೋಲಾರದಿಂದ ಮಂಡ್ಯಕ್ಕೆ ಹೋಗಿದ್ದು, ಲಾಕ್ಡೌನ್ ಸಡಿಲವಾದಾಗ ಮದ್ದೂರಿನಿಂದ ಮೇ. 11ರಂದು ಕೋಲಾರಕ್ಕೆ ವಾಪಸ್ ಬಂದಿದ್ದ. ಜೊತೆಗೆ ನಾಲ್ಕು ದಿನದ ಹಿಂದೆ ಕಾಲಿಗೆ ಗಾಯವಾಗಿದ್ದು, ಕೋಲಾರದ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದ.
ತಾನೇ ಸ್ವಯಂ ಪ್ರೇರಿತವಾಗಿ ಕೊರೊನಾ ತಪಾಸಣೆಯನ್ನೂ ಮಾಡಿಸಿಕೊಂಡಿದ್ದ. ಆರೋಗ್ಯ ಇಲಾಖೆ ವತಿಯಿಂದ ಮೇ. 11ರಂದು ಮಾಡಲಾಗಿದ್ದ ರಕ್ತ ಮಾದರಿಯ ತಪಾಸಣಾ ವರದಿ ಬಂದಿದ್ದು, ಕೊರೊನಾ ಪಾಸಿಟಿವ್ ಎಂದು ದೃಢವಾಗಿದೆ. ಈ ಮೂಲಕ ಕೋಲಾರದ ಕೊರೊನಾ ಸೋಂಕಿತರ ಸಂಖ್ಯೆ ಏಳಕ್ಕೆ ಏರಿಕೆಯಾಗಿದೆ.
ಬಾಡಿಗೆ ಮನೆಯಿಂದ ಪರಾರಿಯಾಗಿದ್ದ ಈತ ಬೆಂಗಳೂರಿನಲ್ಲಿ ಪತ್ತೆಯಾಗಿದ್ದಾನೆ. ಸದ್ಯ ಬೆಂಗಳೂರಿನ ಕೆ.ಸಿ. ಆಸ್ಪತ್ರೆಯಲ್ಲಿ ಚಿಕಿತ್ಸೆಗೊಳಪಟ್ಟಿದ್ದಾನೆ. ಇನ್ನು ಕೋಲಾರದಲ್ಲಿ ಈತ ವಾಸವಿದ್ದ ಮನೆಯ ಸುತ್ತಮುತ್ತಲಿನ ಪ್ರದೇಶವನ್ನ ಕಂಟೇನ್ಮೆಂಟ್ ಝೋನ್ಗೆ ಸೇರ್ಪಡೆ ಮಾಡಲಾಗಿದೆ. ಜೊತೆಗೆ ಪೊಲೀಸರು ಗಾಂಧಿ ನಗರ ಪ್ರದೇಶದಲ್ಲಿ ಬ್ಯಾರಿಕೇಡ್ ಹಾಕಿ ಸೀಲ್ ಡೌನ್ ಮಾಡುತ್ತಿದ್ದಾರೆ. ಕಳೆದ ಮೂರು ದಿನಗಳಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಕೋಲಾರ ಜಿಲ್ಲೆಯ ಜನರಲ್ಲಿ ಆತಂಕ ಮೂಡಿಸಿದೆ.