ಕೋಲಾರ: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ಎದ್ದಿರುವ ಮಾಂಡೌಸ್ ಚಂಡಮಾರುತದ ಪ್ರಭಾವ ಕರಾವಳಿ ಭಾಗದ ಜೊತೆಗೆ ಉತ್ತರ ಕರ್ನಾಟದ ಜಿಲ್ಲೆಗಳ ಮೇಲೂ ಬೀರಿದೆ. ಪರಿಣಾಮ ಕೋಲಾರ ಜಿಲ್ಲೆಯ ಜನರು ಶೀತಗಾಳಿ ಹಾಗೂ ಮಳೆಗೆ ತತ್ತರಿಸಿ ಹೋಗಿದ್ದಾರೆ. ಶೀತ ಗಾಳಿಗೆ ಮನೆಯಿಂದ ಹೊರ ಬಾರದ ಸ್ಥಿತಿ ನಿರ್ಮಾಣವಾಗಿದ್ದು, ಜನರು ಮನೆಯಲ್ಲಿ ಬೆಚ್ಚನೆ ಸ್ವೆಟರ್ ಹಾಗೂ ಟೋಪಿಗಳ ಮೊರೆ ಹೋಗಿದ್ದಾರೆ.
ಇನ್ನು ಬೆಂಬಿಡದೆ ಮೂರು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಜಡಿ ಮಳೆಯಿಂದ ಕಟಾವಿಗೆ ಬಂದಿದ್ದ ರಾಗಿ ಹಾಗೂ ದ್ವಿದಳ ದಾನ್ಯಗಳ ಬೆಳೆಗಳು ನೆಲಕಚ್ಚಿವೆ. ರಾಗಿ ಬೆಳೆ ಸಂಪೂರ್ಣವಾಗಿ ಹಾಳಾಗಿದ್ದು, ಕಟಾವಿಗೆ ಬಂದಿದ್ದ ರಾಗಿ ಮಳೆಗೆ ನೆನೆದು ಮೊಳಕೆಯೊಡೆಯುವಂತಾಗಿದೆ. ದ್ವಿದಳ ದಾನ್ಯಗಳಾದ ಅವರೆ, ತೊಗರಿ ಬೆಳೆಗಳು, ಅವರೆ ಹೂವು ನೆಲಕ್ಕುದುರುತ್ತಿವೆ. ಮಳೆಯ ಅಬ್ಬರಕ್ಕೆ ರೈತರು ವಾರ್ಷಿಕ ಬೆಳೆಗಳಲ್ಲೂ ನಷ್ಟ ಅನುಭವಿಸುವಂತಾಗಿದೆ.
ಸತತವಾಗಿ ಮೂರು ದಿನಗಳಿಂದ ಸುರಿಯುತ್ತಿರುವ ಜಡಿ ಮಳೆಯಿಂದಾಗಿ ಟೊಮೆಟೊ ಬೆಳೆ ನಾಶವಾಗಿದ್ದು, ತೇವಾಂಶ ಹೆಚ್ಚಾಗಿ ಬೆಳೆಗೆ ಹೂಜಿ ಮತ್ತು ಕೀಟಬಾಧೆ ಅಂಟಿಕೊಂಡಿವೆ. ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿದ ರೈತರು, ಟೊಮೆಟೊ ಬೆಳೆ ನಾಶದಿಂದ ಸಂಕಷ್ಟಕ್ಕೀಡಾಗಿದ್ದಾರೆ. ಗಿಡದಲ್ಲಿರುವ ಟೊಮೆಟೊ ಹಣ್ಣು ಕೀಳಲು ಆಗದೆ ತೋಟದಲ್ಲಿ ಬಿಟ್ಟಿದ್ದು, ಸರ್ಕಾರ ತಮ್ಮ ನೆರವಿಗೆ ಬರಬೇಕು ಎಂದು ರೈತರು ಒತ್ತಾಯಿಸಿದ್ದಾರೆ.
ಮನೆಯ ಛಾವಣಿಗಳು ಕುಸಿತ: ಜಡಿ ಮಳೆಗೆ ಬಂಗಾರಪೇಟೆ ತಾಲ್ಲೂಕು ದೇಶಿಹಳ್ಳಿ ಗ್ರಾಮದಲ್ಲಿ ಅಮರೇಶ್ ಹಾಗೂ ಸುಗುಣಮ್ಮ ಎಂಬುವರಿಗೆ ಸೇರಿದ ಮನೆಯ ಮೇಲ್ಛಾವಣಿಯೊಂದು ಕುಸಿದು ಬಿದ್ದಿದೆ. ಬಂಗಾರಪೇಟೆ ತಾಲ್ಲೂಕು ಪುರ ಗ್ರಾಮದಲ್ಲಿ ಸೋಮಪ್ಪ ಎಂಬುವರಿಗೆ ಸೇರಿದ ಮನೆಯ ಮೇಲ್ಛಾವಣಿಯೂ ಕುಸಿದುಬಿದ್ದಿದೆ. ಅದೃಷ್ಟವಶಾತ್ ಎರಡೂ ಕಡೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಕ್ರಮವಾಗಿ ಬಂಗಾರಪೇಟೆ ಪೊಲೀಸ್ ಠಾಣಾ ವ್ಯಾಪ್ತಿ ಹಾಗೂ ಕಾಮಸಮುದ್ರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ಜರುಗಿದೆ. ಬಂಗಾರಪೇಟೆ ಪುರಸಭೆ ಅಧಿಕಾರಿಗಳು ಅವರ ವ್ಯಾಪ್ತಿಯ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಳೆಗೆ ಜಿಲ್ಲೆಯಾದ್ಯಂತ ಲಕ್ಷಾಂತರ ಮೌಲ್ಯದ ಬೆಳೆ ನಾಶವಾಗಿದೆ.
ಜಿಲ್ಲೆಯಲ್ಲಿ ಜಿಟಿ ಜಿಟಿ ಮಳೆ ಹಾಗೂ ಶೀತ ಗಾಳಿ ಹಿನ್ನೆಲೆ, ಸರ್ಕಾರಿ ಹಾಗೂ ಖಾಸಗಿ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಮಕ್ಕಳ ಹಿತ ದೃಷ್ಟಿಯಿಂದ ರಜೆ ಘೋಷಿಸಿದ್ದು, ಶಿಥಿಲಾವಸ್ಥೆಯಲ್ಲಿರುವ ಶಾಲಾ ಕಟ್ಟಡಗಳ ಸಮೀಪ ಸುತ್ತಾಡದಂತೆ ಕ್ರಮ ವಹಿಸಲಾಗಿದೆ. ಅಲ್ಲದೆ ಪಾಠ ಪ್ರವಚನಗಳನ್ನು ಮುಂದಿನ ಸರ್ಕಾರಿ ರಜಾ ದಿನಗಳಲ್ಲಿ ಸರಿದೂಗಿಸುವಂತೆ ಸಂಬಂಧಪಟ್ಟ ಅಧಿಕಾರಿಗಳು ಸೂಚನೆ ನೀಡಿದ್ದಾರೆ.
ಇದನ್ನೂ ಓದಿ: ಮಳೆಹಾನಿ ಪ್ರದೇಶಕ್ಕೆ ಡಿಸಿಗಳು ಭೇಟಿ ನೀಡಿ ಪರಿಹಾರ ವಿತರಣೆಗೆ ಕ್ರಮ ಕೈಗೊಳ್ಳಬೇಕು: ಸಿಎಂ ಸೂಚನೆ