ಕೋಲಾರ : ಸಿದ್ದರಾಮಯ್ಯ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಕೋಲಾರ ಕ್ಷೇತ್ರದಿಂದಲೇ ಸ್ಪರ್ಧೆ ಮಾಡೋದಾಗಿ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ, ಇದಾದ ನಂತರ ಕೋಲಾರ ಕ್ಷೇತ್ರದಲ್ಲಿನ ರಾಜಕೀಯ ಲೆಕ್ಕಾಚಾರಗಳು ಬದಲಾಗಿವೆ, ಸಿದ್ದರಾಮಯ್ಯ ಬಂದರೆ ಎದುರಾಳಿಗಳು ಇರುವುದಿಲ್ಲ ಎಂದುಕೊಂಡಿದ್ದ ಕಾಂಗ್ರೆಸ್ಗೆ ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ಅಭ್ಯರ್ಥಿಗಳು ಸಿದ್ದರಾಮಯ್ಯ ಬಂದರೂ ಜಗ್ಗೋದೂ ಇಲ್ಲ, ಬಗ್ಗೋದೂ ಇಲ್ಲ ಎನ್ನುತ್ತಿದ್ದಾರೆ.
ಕಳೆದ ಹಲವು ದಿನಗಳಿಂದ ಮಾಜಿ ಸಿಎಂ ಸಿದ್ದರಾಮಯ್ಯ ಈ ಬಾರಿ ಚುನಾವಣೆಯಲ್ಲಿ ಯಾವ ಕ್ಷೇತ್ರದಿಂದ ಸ್ಪರ್ಧೆ ಮಾಡ್ತಾರೆ ಅನ್ನೋ ವಿಚಾರವಾಗಿ ಹಲವು ಟೀಕೆ ಟಿಪ್ಪಣಿಗಳು ಕೇಳಿ ಬಂದಿತ್ತು. ಈ ಎಲ್ಲ ಗೊಂದಲಗಳಿಗೆ ತೆರೆ ಎಳೆಯುವ ನಿಟ್ಟಿನಲ್ಲಿ ಸಿದ್ದರಾಮಯ್ಯ ಈ ಬಾರಿ ಚಿನ್ನದ ನಾಡು ಕೋಲಾರದಿಂದಲೇ ಸ್ಪರ್ಧೆ ಮಾಡೋದಾಗಿ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ. ಸಿದ್ದರಾಮಯ್ಯರಂತ ಪ್ರಬಲ ಅಭ್ಯರ್ಥಿ ಸ್ಪರ್ಧೆ ಮಾಡಿದರೆ, ಎದುರಾಳಿಗಳೇ ಇರೋದಿಲ್ಲ ಅನ್ನೋ ಲೆಕ್ಕಾಚಾರ ಹಾಕಿ ಅಳೆದು ತೂಗಿ ಕೋಲಾರ ಕ್ಷೇತ್ರ ಸಿದ್ದರಾಮಯ್ಯ ಅವರಿಗೆ ಸೇಫ್ ಎಂದುಕೊಂಡಿದ್ದ, ಕೋಲಾರ ಕಾಂಗ್ರೆಸ್ ನಾಯಕರುಗಳಿಗೆ ತಮ್ಮ ಲೆಕ್ಕಾಚಾರ ತಪ್ಪಾಗುತ್ತಾ ಎನ್ನುವ ಮಟ್ಟಿಗೆ ಬಿಜೆಪಿ ಹಾಗೂ ಜೆಡಿಎಸ್ ಅಭ್ಯರ್ಥಿಗಳು ಪ್ರತಿಕ್ರಿಯೆ ನೀಡುತ್ತಿದ್ದಾರೆ.
’ಸಿದ್ದರಾಮಯ್ಯ ಅಹಿಂದ ನಾಯಕರೇ ಅಲ್ಲ’: ಅಹಿಂದ ಎನ್ನುವ ಹೆಸರು ಹೇಳಿಕೊಂಡು ಮತ್ತೊಬ್ಬ ಅಹಿಂದ ಮುಖಂಡನನ್ನು ಮುಗಿಸಲು ಬರುತ್ತಿರುವ ಸಿದ್ದರಾಮಯ್ಯ ಅಹಿಂದ ನಾಯಕನೇ ಅಲ್ಲ ಎನ್ನುವ ಮೂಲಕ ಬಿಜೆಪಿ ಸಂಭಾವ್ಯ ಅಭ್ಯರ್ಥಿ ವರ್ತೂರ್ ಪ್ರಕಾಶ್ ಟೀಕೆ ಮಾಡಿದ್ದಾರೆ. ಸಿದ್ದರಾಮಯ್ಯ ನಾನು ಅಭ್ಯರ್ಥಿ ಎಂದು ಘೋಷಣೆ ಮಾಡಿದ ಕೂಡಲೇ 5 ಸಾವಿರ ಜನರನ್ನು ಕೋಲಾರ ಕ್ಷೇತ್ರದಲ್ಲಿ ಸೇರಿಸಿ ನೋಡೋಣ ಎಂದು ವರ್ತೂರ್ ಪ್ರಕಾಶ್ ಸವಾಲು ಹಾಕಿದ್ದಾರೆ. ಸಿದ್ದರಾಮಯ್ಯ ನವರ ಕೊನೆಯ ಚುನಾವಣೆ ಸೋಲಿನೊಂದಿಗೆ ಅಂತ್ಯಗೊಳ್ಳುವುದು ಸತ್ಯ ಎನ್ನುತ್ತಿದ್ಧಾರೆ.
ವರುಣಾದಲ್ಲಷ್ಟೇ ಅವರ ಅಬ್ಬರ: ಸಿದ್ದರಾಮಯ್ಯ ಅವರ ಅಬ್ಬರ ಏನಿದ್ರು ವರುಣಾ ಕ್ಷೇತ್ರದಲ್ಲಿ ಇರಬಹುದು. ಆದರೆ, ಕೋಲಾರದಲ್ಲಿ ನನ್ನದೇ ಅಬ್ಬರ ಇಲ್ಲಿ ಮನೆ ಮನೆಗೂ ಗೊತ್ತಿರುವ ವ್ಯಕ್ತಿ ವರ್ತೂರ್ ಪ್ರಕಾಶ್, ಸಿದ್ದರಾಮಯ್ಯ ಈ ಬಾರಿ ಮನೆಗೆ ಹೋಗೋದು ಖಚಿತ ಎಂದು ಹೇಳಿದ್ದಾರೆ. ಆದರೆ, ಸಿದ್ದರಾಮಯ್ಯ ಕೋಲಾರ ಕ್ಷೇತ್ರದ ಜನರ ಒತ್ತಾಯದ ಮೇರೆಗೆ ತಾನು ಸ್ಪರ್ಧೆ ಮಾಡುವುದಾಗಿ ಹೇಳುತ್ತಿದ್ದಾರೆ. ಇದರಿಂದ ಅವರ ಮುಖ್ಯಮಂತ್ರಿ ಸ್ಥಾನ ತಪ್ಪಿಸಲು ಡಿ.ಕೆ ಶಿವಕುಮಾರ್ ಮತ್ತು ರಮೇಶ್ ಕುಮಾರ ಮಾಡಿರುವ ಷಡ್ಯಂತ್ರ್ಯ ಎಂದು ವರ್ತೂರು ಪ್ರಕಾಶ್ ಹೇಳಿದರು.
ಸಿದ್ದರಾಮಯ್ಯ ಅವರನ್ನು ಕೋಲಾರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡುವಂತೆ ಒತ್ತಾಯ ಮಾಡಿ ಕರೆತಂದಿದ್ದ ಕೋಲಾರ ಜಿಲ್ಲೆಯ ಕಾಂಗ್ರೇಸ್ ನಾಯಕರುಗಳು, ಸಿದ್ದರಾಮಯ್ಯ ಅವರು ನಾನು ಕೋಲಾರ ಕ್ಷೇತ್ರದ ಅಭ್ಯರ್ಥಿ ಎಂದು ಘೋಷಣೆ ಮಾಡುವ ವೇಳೆ, ಸಾವಿರಾರು ಸಂಖ್ಯೆಯಲ್ಲಿ ಜನ ಬೆಂಬಲ ತೋರಬೇಕಿತ್ತು. ಆದರೆ, ಸಿದ್ದರಾಮಯ್ಯರ ವರ್ಚಸ್ಸಿಗೆ ತಕ್ಕಂತೆ ಕಾರ್ಯಕ್ರಮ ಇರಲಿಲ್ಲ ಎಂದು ಬಿಜೆಪಿ ಮುಖಂಡ ವರ್ತೂರ್ ಪ್ರಕಾಶ್ ಟೀಕೆ ಮಾಡಿದ್ದಾರೆ.
’ಸಿದ್ದರಾಮಯ್ಯ ಅಭ್ಯರ್ಥಿ ಎಂದು ಘೋಷಣೆ ಮಾಡಿದ್ದನ್ನ ಸ್ವಾಗತಿಸುತ್ತೇನೆ’: ಇನ್ನು ಜೆಡಿಎಸ್ ಅಭ್ಯರ್ಥಿ ಸಿಎಂಆರ್ ಶ್ರೀನಾಥ್, ಸಿದ್ದರಾಮಯ್ಯ ಅವರು ಅಭ್ಯರ್ಥಿ ಎಂದು ಘೋಷಣೆ ಮಾಡಿರುವುದಕ್ಕೆ ನಾನು ಅವರನ್ನು ಸ್ವಾಗತ ಮಾಡುತ್ತೇನೆ. ಅಂತಹವರ ವಿರುದ್ದ ನಾನು ಸ್ಪರ್ಧೆ ಮಾಡುವುದಕ್ಕೆ ನನಗೆ ಹೆಮ್ಮೆಯಿದೆ. ನನಗೆ ಇದು ಮೊದಲ ಚುನಾವಣೆಯಾದರೂ ಸಿದ್ದರಾಮಯ್ಯ ಅವರ ವಿರುದ್ದ ಸ್ಪರ್ಧೆ ಮಾಡೋ ವಿಚಾರವಾಗಿ ತನಗೆ ಯಾವುದೇ ಭಯವೂ ಇಲ್ಲ, ಅಂಜಿಕೆ ಇಲ್ಲ ಎಂದಿದ್ದಾರೆ.
ಕಾರಣ ಕೋಲಾರ ಕ್ಷೇತ್ರ ನಾನು ಹುಟ್ಟಿ ಬೆಳೆದ ಊರು, ಇಲ್ಲಿ ಕಳೆದ ಹಲವು ವರ್ಷಗಳಿಂದ ಸಮಾಜ ಸೇವೆ ಮಾಡಿಕೊಂಡು, ಕೋವಿಡ್ ಸೇರಿದಂತೆ ಹಲವು ಜನರ ಸಂಕಷ್ಟದಲ್ಲಿ ಜೊತೆಗಿದ್ದೇನೆ ಹಾಗಾಗಿ ಸಿದ್ದರಾಮಯ್ಯ ಅವರು ಅಭ್ಯರ್ಥಿಯಾಗಿ ಕಣಕ್ಕಿಳಿದರೂ ಕೂಡಾ ನಾನು ಗೆಲ್ಲೋದು ನೂರಕ್ಕೆ ನೂರು ಖಚಿತ ಎಂದು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ಧಾರೆ.
ಒಟ್ಟಾರೆ, ಸಿದ್ದರಾಮಯ್ಯ ಹಲವು ಲೆಕ್ಕಾಚಾರ ಹಾಕಿ ಕೋಲಾರ ಕ್ಷೇತ್ರದಿಂದಲೇ ಸ್ಪರ್ಧೆ ಮಾಡೋದಾಗಿ ಘೋಷಣೆ ಮಾಡಿದ್ದಾರೆ. ಆದರೆ, ಈ ವೇಳೆ ತನ್ನ ಎದುರಾಳಿಗಳನ್ನು ಸಿದ್ದರಾಮಯ್ಯ ಗಣನೆಗೆ ತೆಗೆದುಕೊಂಡಂತಿಲ್ಲ, ಹಾಗಾಗಿ ಬಿಜೆಪಿ ಹಾಗೂ ಜೆಡಿಎಸ್ನ ಅಭ್ಯರ್ಥಿಗಳು ಕೂಡಾ ಸ್ಥಳೀಯರು ಅನ್ನೋಕಾರಣಕ್ಕೆ ಪ್ರಬಲ ಪ್ರತಿಸ್ಪರ್ಧೆ ಕೊಟ್ಟರೂ ಆಶ್ಚರ್ಯವಿಲ್ಲ.
ಇದನ್ನೂ ಓದಿ :ಕೋಲಾರ ಕ್ಷೇತ್ರ ಸಿದ್ದರಾಮಯ್ಯಗೆ ಕಬ್ಬಿಣದ ಕಡಲೆಯಾಗುತ್ತಾ..? ಸುಲಭವಾಗಿ ಒಲಿಯುತ್ತಾ?