ಕೋಲಾರ: ಕೊರೊನಾ ವೈರಸ್ ಹರಡುವ ಭೀತಿಯಿಂದ ನಿನ್ನೆ ಒಂದು ದಿನ ಜನತಾ ಕರ್ಫ್ಯೂ ಆಚರಿಸಲು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದರು. ಈ ಹಿನ್ನೆಲೆ ನಿನ್ನ ದೇಶದಾದ್ಯಂತ ಕರ್ಫ್ಯೂ ಜಾರಿಯಾಗಿತ್ತು. ಅಲ್ಲದೆ ನಿನ್ನೆ ಕೋಲಾರದಲ್ಲಿ ಸಂಪೂರ್ಣ ಬೆಂಬಲ ವ್ಯಕ್ತವಾಗಿತ್ತು. ಆದರೆ ಕೋಲಾರದಲ್ಲಿ ಇಂದೂ ಸಹ ಜನತಾ ಕರ್ಫ್ಯೂ ಮುಂದುವರಿಯುವ ಸಾಧ್ಯತೆ ಹೆಚ್ಚಾಗಿದೆ.
ಬೆಳಗ್ಗೆಯಿಂದ ಸಾರಿಗೆ ಸಂಚಾರವಿಲ್ಲದೆ ಪ್ರಯಾಣಿಕರು ಪರದಾಡುವ ಪರಿಸ್ಥಿತಿ ಎದುರಾಗಿದೆ. ಕೋಲಾರದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ನೂರಾರು ಪ್ರಯಾಣಿಕರು ಬಸ್ಗಾಗಿ ಕಾದುಕುಳಿತ್ತಿದ್ದು, ಮುಂಜಾನೆಯಿಂದಲೂ ಕೆಎಸ್ಆರ್ಟಿಸಿ ಬಸ್ಗಳು ರಸ್ತೆಗಿಳಿದಿಲ್ಲ. ಹೀಗಾಗಿ ಪ್ರಯಾಣಿಕರು ಬಸ್ ನಿಲ್ದಾಣದಿಂದ ಹಿಂತಿರುಗುತ್ತಿದ್ದು, ಆಟೋ ಹಾಗೂ ಖಾಸಗೀ ಬಸ್ಗಳನ್ನ ಅವಲಂಬಿಸಿದ್ದಾರೆ.
ಇದನ್ನೇ ಬಂಡವಾಳವನ್ನಾಗಿ ಮಾಡಿಕೊಂಡಿರುವ ಆಟೋ ಹಾಗೂ ಖಾಸಗೀ ಬಸ್ನವರು, ದುಪ್ಪಟ್ಟು ಹಣವನ್ನ ಪ್ರಯಾಣಿಕರಿಂದ ವಸೂಲಿ ಮಾಡಲಾಗುತ್ತಿದೆ. ಇನ್ನು ದೂರದ ಊರುಗಳಿಗೆ, ಹೊರ ಜಿಲ್ಲೆ ಹಾಗೂ ಹೊರ ರಾಜ್ಯಕ್ಕೆ ಬಸ್ ಸಂಚಾರ ನಿಷೇಧ ಮಾಡಿದ್ದು, ನಿಲ್ದಾಣಕ್ಕೆ ಬಂದಂತಹ ಪ್ರಯಾಣಿಕರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಕೋಲಾರ ಜಿಲ್ಲೆಯಾದ್ಯಂತ ಜಿಲ್ಲಾಡಳಿತ ನಿಷೇಧಾಜ್ಞೆಯನ್ನ ಜಾರಿ ಮಾಡಿದ್ದು, ಅದ್ರಂತೆ ಹೊಟೆಲ್, ಬೇಕರಿ, ಅಂಗಡಿಗಳು ಪೂರ್ಣ ಪ್ರಮಾಣದಲ್ಲಿ ತೆರೆಯುವುದು ಅನುಮಾನವಾಗಿದೆ. ಜೊತೆಗೆ ಹೋಟೆಲ್ಗಳಲ್ಲಿ ಕೇವಲ ಪಾರ್ಸೆಲ್ ತೆಗೆದುಕೊಂಡು ಹೋಗುವುದಕ್ಕೆ ಮಾತ್ರ ಅನುಮತಿ ನೀಡಲಾಗಿದೆ. ಇನ್ನು ದಿನನಿತ್ಯದ ಅಗತ್ಯ ವಸ್ತುಗಳಾದ ಹಾಲು, ತರಕಾರಿ ಮಾರಾಟ, ಔಷಧಿ ಅಂಗಡಿಗಳು ಹೊರತು ಪಡಿಸಿ ಎಲ್ಲವೂ ಬಂದ್ ಆಗಿದೆ.