ಕೋಲಾರ: ಕೃಷಿಯಲ್ಲಿ ಲಾಭಕ್ಕಿಂತ ನಷ್ಟವೇ ಹೆಚ್ಚೆಂದು ಕೃಷಿಯಿಂದ ದೂರವೇ ಉಳಿಯುವ ಮಂದಿ ಹೆಚ್ಚಿದ್ದಾರೆ. ಅಲ್ಲದೇ ಕೃಷಿಯಿಂದ ಆದಾಯ ಕಡಿಮೆ ಎಂದು ಬೇರೆ ವೃತ್ತಿಯಡೆಗೆ ಮುಖ ಮಾಡಿರುತ್ತಾರೆ. ಆದರೆ, ಜಿಲ್ಲೆಯ ರೈತರೊಬ್ಬರು ಆಧುನಿಕ ಕೃಷಿ ಜೊತೆಗೆ ಮಿಶ್ರ ಬೇಸಾಯ ಕೈಗೊಂಡು ಯಶಸ್ವಿಯಾಗಿದ್ದು, ಸುತ್ತ ಹತ್ತಾರು ತಾಲೂಕಿಗೆ ಮಾದರಿಯಾಗಿದ್ದಾರೆ .
ಇಲ್ಲಿನ ಸುಗಟೂರು ಗ್ರಾಮದ ಮುರುಳೀಧರ್ ಎಂಬುವರು ತಮಗಿರುವ ಸಣ್ಣ ಪ್ರಮಾಣದ ಜಮೀನಿನಲ್ಲಿಯೇ ವಿವಿಧ ರೀತಿಯ ಬೆಳೆ ಬೆಳೆದಿದ್ದಾರೆ. ಇವರ ಇನ್ನೊಂದು ವಿಶೇಷ ಸಾಧನೆ ಎಂದರೆ ಕಾಶ್ಮೀರಿ ಮೂಲದ ಜಮುನಾಪುರಿ ಮೇಕೆಗಳ ಸಾಕಣೆ ಮಾಡಿರುವುದು. ಜಮುನಾಪುರಿ ಮೇಕೆಗಳು ಬೇರೆಲ್ಲ ತಳಿಗಳಿಗಿಂತಲೂ ವಿಭಿನ್ನವಾಗಿದ್ದು, ಇನ್ನಿಲ್ಲದ ಬೇಡಿಕೆ ಇದೆ. ಹೈದರಾಬಾದ್ನಿಂದ ಮೇಕೆಗಳ ತಂದು ಸಾಕಣೆ ಮಾಡಿರುವ ಇವರು, ಲಕ್ಷಾಂತರ ರೂಪಾಯಿ ಲಾಭ ಗಳಿಸಿದ್ದಾರೆ.
ಸುಮಾರು 10ರಿಂದ 15 ಮೇಕೆಗಳ ಸಾಕಿರುವ ಇವರು, ಇದರಿಂದ ಅತಿ ಹೆಚ್ಚು ಲಾಭ ಗಳಿಸಿದ್ದಾರೆ. ಒಂದು ಮೇಕೆ ಸರಾಸರಿ 120ರಿಂದ 150 ಕೆ.ಜಿ ತೂಕ ಬರಲಿದ್ದು, ಮಾರುಕಟ್ಟೆಯಲ್ಲಿ ಒಂದು ಮೇಕೆಯ ಬೆಲೆ 2 ಲಕ್ಷದಿಂದ 9 ಲಕ್ಷದ ವರೆಗೂ ಇರಲಿದೆ. ಹೀಗಾಗಿ ರೈತ ಮುರುಳೀಧರ್ ಪಾಲಿಗೆ ಈ ಜಮುನಾಪುರಿ ಮೇಕೆಗಳು ಚಿನ್ನದ ಮೊಟ್ಟೆ ಇಡುವ ಕೋಳಿಯಾಗಿವೆ.
ಲಾಕ್ಡೌನ್ನಲ್ಲಿ ಕೃಷಿ ವಲಯ ನಷ್ಟದತ್ತ ಸಾಗುತ್ತಿದ್ದರೆ ಇತ್ತ ಮುರುಳೀಧರ್ ಮಾತ್ರ ಜಮುನಾಪುರಿ ಮೇಕೆಗಳ ಮಾರಾಟದಿಂದ ಲಾಭ ಗಳಿಸಿದ್ದರು. ಇನ್ನು ಕೇವಲ ಮೇಕೆಗಳನ್ನು ಸಾಕೋದಷ್ಟೇ ಅಲ್ಲದೇ ತಮಗಿರುವ ಜಮೀನಿನಲ್ಲಿ ಇವರು ಮಾವು, ತೆಂಗು, ದಾಳಿಂಬೆ, ನಿಂಬೆ, ಸಪೋಟ, ಜಂಬು ನೇರಳೆ, ಅಂಜೂರ, ರಾಮಫಲ, ಸೀತಾಫಲ, ಲಕ್ಷ್ಮಣ ಫಲ, ಕಿತ್ತಳೆ, ಹಲಸು, ಕಿರುನೆಲ್ಲಿಕಾಯಿ, ಗೋಡಂಬಿ ಬೆಳೆ ಬೆಳೆಯುತ್ತಿದ್ದಾರೆ.
ಮಳೆಗಾಲ, ಚಳಿಗಾಲ, ಬೇಸಿಗೆಕಾಲ ಹೀಗೆ ಮೂರು ಕಾಲದಲ್ಲಿ ಒಂದಲ್ಲ ಒಂದು ರೀತಿಯ ಹಣ್ಣು ಬಿಡುವ ಹತ್ತಾರು ಮರಗಳು ಇವರಿಗೆ ಲಾಭ ತರುತ್ತದೆ. ಇವರ ತೋಟದಲ್ಲಿ ಸುಮಾರು 2000ಕ್ಕೂ ಹೆಚ್ಚು ಮರಗಳಿದ್ದು, ಇವರಿಗೆ ಒಂದಿಲ್ಲೊಂದು ರೀತಿಯಲ್ಲಿ ಲಾಭ ತರುವಂತ ಮರಗಳು ಬೆಳೆದು ನಿಂತಿವೆ. ಜೊತೆಗೆ ತಮಿಳುನಾಡಿನ ವಿಶೇಷ ತಳಿಯ ಕೋಳಿಗಳು, ಗಿರ್ ತಳಿಯ ಹಸುಗಳು, ಮಲೆನಾಡು ಗಿಡ್ಡದ ನಾಟಿ ಹಸುಗಳನ್ನು ಸಾಕುವ ಮೂಲಕ ವಿಭಿನ್ನ ಹಾಗೂ ಪ್ರಾಯೋಗಿಕ ಕೃಷಿ ಮಾಡುವ ಮೂಲಕ ವಾರ್ಷಿಕ 10 ಲಕ್ಷಕ್ಕೂ ಅಧಿಕ ಆದಾಯಗಳಿಸುತ್ತಿದ್ದಾರೆ.
ಒಟ್ಟಾರೆ ಕೃಷಿ ಎಂದರೆ ನಷ್ಟದಲ್ಲಿ ಕೈಸುಟ್ಟುಕೊಳ್ಳಬೇಕಾಗುತ್ತದೆ ಎಂಬ ಜನರ ನಡುವೆ ಆಧುನಿಕ ಹಾಗೂ ಮಿಶ್ರ ಬೇಸಾಯದ ಮೂಲಕ ಯಶಸ್ಸು ಕಂಡಿರುವ ಇವರ ಸಾಧನೆ ಇಂದಿನ ಕಾಲಕ್ಕೆ ಸೂಕ್ತ ಎನಿಸುತ್ತದೆ.