ಕೋಲಾರ : ಮಾಜಿ ಕೇಂದ್ರ ಸಚಿವ ಆರ್.ಎಲ್ ಜಾಲಪ್ಪ ಸಂಸ್ಥೆ ಮೇಲೆ ಮೂರನೇ ದಿನವೂ ಐಟಿ ಅಧಿಕಾರಿಗಳು ಶೋಧ ಕಾರ್ಯ ಮುಂದುವರೆಸಿದ್ದಾರೆ.
ನಿನ್ನೆ ತಡರಾತ್ರಿಯವರೆಗೂ ಕಡತಗಳ ಪರಿಶೀಲನೆ ನಡೆಸಿದ ಅಧಿಕಾರಿಗಳು ರಾತ್ರಿ ಜಾಲಪ್ಪ ಅವರ ಗೆಸ್ಟ್ಹೌಸ್ನಲ್ಲೇ ಉಳಿದುಕೊಂಡು ಇಂದು ಬೆಳಗ್ಗೆ ತಿಂಡಿ ಮುಗಿಸಿ ಶೋಧ ಕಾರ್ಯ ಮುಂದುವರೆಸಿದ್ದಾರೆ.
ನಿನ್ನೆ ರಾತ್ರಿ ಸಂಸ್ಥೆ ಕಾರ್ಯದರ್ಶಿ ಜೆ.ಎಚ್. ನಾಗರಾಜ್ರನ್ನು ಚಿಕ್ಕಬಳ್ಳಾಪುರದಿಂದ ಕರೆದುಕೊಂಡು ಬಂದು ವಿಚಾರಣೆ ನಡೆಸಿ ಮತ್ತೆ ನಾಗರಾಜ್ರನ್ನು ಚಿಕ್ಕಬಳ್ಳಾಪುರಕ್ಕೆ ವಾಪಸ್ ಕರೆದೊಯ್ದಿದ್ದ ಅಧಿಕಾರಿಗಳು ಕೆಲ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಇನ್ನು ಸತತ ಮೂರನೇ ದಿನವೂ ಸಹ ಸಂಶೋಧನಾ ಕೇಂದ್ರದಲ್ಲಿ ಕಡತಗಳ ಪರಿಶೀಲನೆ, ವಿಚಾರಣೆ ಕೈಗೊಂಡಿರುವ ಐಟಿ ಅಧಿಕಾರಿಗಳು ಇಂದು ಕಾಲೇಜಿನ ಪ್ರಾಂಶುಪಾಲ ಶ್ರೀ ರಾಮುಲು, ರಿಜಿಸ್ಟ್ರಾರ್ ಕೆ.ಎಂ.ವಿ ಪ್ರಸಾದ್, ಎಂ. ಎಸ್ ಲಕ್ಷ್ಮಯ್ಯ ಅವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ.
ದೇವರಾಜ್ ಅರಸು ಸಂಶೋಧನಾ ಕೇಂದ್ರದಲ್ಲಿ ಬೀಡು ಬಿಟ್ಟಿರುವ 12 ಜನ ಐಟಿ ಅಧಿಕಾರಿಗಳು ಹಂತ ಹಂತವಾಗಿ ವಿವಿಧ ಆಯಾಮಗಳಲ್ಲಿ ತನಿಖೆ ಕಾರ್ಯ ಮುಂದುವರೆಸಿದ್ದಾರೆ. ಇದೇ ಸಂದರ್ಭದಲ್ಲಿ ದೇವರಾಜ್ ಅರಸು ಸಂಶೋಧನಾ ಸಂಸ್ಥೆ ಬಳಿ ಪೊಲೀಸ್ ರಿಂದ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.
ಮಾಜಿ ಡಿಸಿಎಂ ಡಾ.ಜಿ ಪರಮೇಶ್ವರ್ ಒಡೆತನದ ಶ್ರೀ ಸಿದ್ದಾರ್ಥ ಮೆಡಿಕಲ್ ಕಾಲೇಜಿನಲ್ಲಿ ಮೂರನೇ ದಿನವೂ ಐಟಿ ತಂಡದಿಂದ ಶೋಧ ಕಾರ್ಯ ಮುಂದುವರೆದಿದೆ.