ಕೋಲಾರ: ಭಾರತೀಯ ಜನತಾ ಪಾರ್ಟಿ ಹಾಗೂ ಸಿಎಂ ಯಡಿಯೂರಪ್ಪ ಅವರು ದ್ವೇಷದ ರಾಜಕಾರಣ ಮಾಡಿದ್ದರೆ, ರೇವಣ್ಣ ಅವರು ಮನೆಯಲ್ಲಿ ಇರುವುದಕ್ಕೆ ಆಗುತ್ತಿರಲಿಲ್ಲ ಎಂದು ಕೋಲಾರದಲ್ಲಿ ಆರೋಗ್ಯ ಸಚಿವ ಶ್ರೀರಾಮುಲು, ರೇವಣ್ಣ ಅವರಿಗೆ ಟಾಂಗ್ ನೀಡಿದ್ರು.
ಕೋಲಾರದಲ್ಲಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಉದ್ಘಾಟನೆಗೆ ಆಗಮಿಸಿ, ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ದ್ವೇಷದ ರಾಜಕಾರಣ ಮಾಡುವಂತಹ ಪರಿಸ್ಥಿತಿ ನಮಗೆ ಇಲ್ಲ. ಯಡಿಯೂರಪ್ಪ ಅವರು ಇತಿಹಾಸದಲ್ಲಿ ಎಲ್ಲೂ ದ್ವೇಷದ ರಾಜಕಾರಣ ಮಾಡಿಲ್ಲ, ಒಂದು ವೇಳೆ ಮಾಡಿದ್ದರೆ, ಕಾಂಗ್ರೆಸ್, ಜೆಡಿಎಸ್ನವರು ಮನೆಯಲ್ಲಿ ಇರಲು ಆಗುತ್ತಿರಲಿಲ್ಲ, ಎಲ್ಲಿ ಇರಬೇಕಾಗಿತ್ತೋ ಅಲ್ಲಿ ಇರುತ್ತಿದ್ದರು ಎಂದು ರೇವಣ್ಣ ಅವರಿಗೆ ತಿರುಗೇಟು ನೀಡಿದ್ರು.
ಸಿದ್ದರಾಮಯ್ಯ ಅವರು ನನಗೆ ಒಳ್ಳೆಯ ಸ್ನೆಹಿತರು. ಪಕ್ಷ, ಪಕ್ಷದ ಸಿದ್ದಾಂತಗಳು ಬಂದಾಗ ನಾನು ಅವರನ್ನ ವಿರೋಧಿಸುತ್ತೇನೆಯೇ ಹೊರತು, ಅವರಿಗೆ ಮೊದಲಿನಿಂದ ನಾನು ಗೌರವ ಕೊಡುತ್ತಾ ಬಂದಿದ್ದೇನೆ ಎಂದರು. ಇನ್ನು ಆನಂದ್ ಸಿಂಗ್‌ಗೆ ಅರಣ್ಯ ಸಚಿವ ಖಾತೆ ನೀಡುವುದರ ಕುರಿತು ಆನಂದ್ ಸಿಂಗ್ ಪರ ಬ್ಯಾಟಿಂಗ್ ನಡೆಸಿದ ಅವರು, ಆನಂದ್ ರಾಜಕೀಯ ಜೀವನದಲ್ಲಿ ಪ್ರಮಾಣಿಕವಾಗಿ ಆಢಳಿತ ಮಾಡಿಕೊಳ್ಳುತ್ತಾ ಬಂದಿದ್ದಾರೆ. ಗಣಿ ವಿಚಾರ ಬಂದಾಗ ಜನಾರ್ಧನ್ ರೆಡ್ಡಿ, ಆನಂದ್ ಸಿಂಗ್ ಸೇರಿದಂತೆ ಕೆಲ ಶಾಸಕರ ಮೇಲೆ ಆಗಿನ ಕಾಂಗ್ರೆಸ್ ಸರ್ಕಾರ ಮಾಡಿರುವ ಆರೋಪಗಳು ರಾಜಕೀಯ ಷಡ್ಯಂತರದಿಂದ ಕೂಡಿರುವ ಆರೋಪಗಳಾಗಿವೆ ಅಷ್ಟೆ ಎಂದರು.
ಅಷ್ಟೇ ಅಲ್ಲದೇ, ಖುದ್ದು ನ್ಯಾಯಾಲಯ ಆನಂದ್ರನ್ನು ತಪ್ಪಿತಸ್ಥರು ಎಂದು ಸಾಬೀತುಪಡಿಸುವವರೆಗೂ ಅವರು ತಪ್ಪಿತಸ್ಥರಲ್ಲ. ಅರಣ್ಯ ಸಚಿವ ಖಾತೆಯನ್ನ ಸಮರ್ಥವಾಗಿ ಮುಂದುವರೆಸಿಕೊಂಡು ಹೋಗುವ ಶಕ್ತಿ ಅವರಿಗಿದೆ ಎಂದರು.
ಇದೇ ವೇಳೆ ಅವರು ಮಾತನಾಡಿ, ವೈದ್ಯರಿಗೆ ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆ ಎರಡು ಕಡೆ ಸೇವೆ ಮಾಡಲು ಅವಕಾಶವಿಲ್ಲ. ಒಂದು ವೇಳೆ ಎರಡೂ ಕಡೆ ಸೇವೆ ಮಾಡಿದರೆ ಯಾವುದೇ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ರು. ಇನ್ನೂ, ಆಸ್ಪತ್ರೆಗಳಲ್ಲಿ ಡಿ ಗ್ರೂಪ್ ನೌಕರರನ್ನು ತೆಗೆಯದಂತೆ ಸೂಚನೆ ನೀಡಿರುವುದಾಗಿ ತಿಳಿಸಿದ್ರು.