ಕೋಲಾರ: ಸಿದ್ದರಾಮಯ್ಯ ಅವರು ಅಹಿಂದವೇ ಮಾಡಲಿ, ಏನಾದರೂ ಮಾಡಿಕೊಳ್ಳಲಿ. ಅವರಿಗೆ ನನಗೆ ಸಂಬಂಧವಿಲ್ಲ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್ ಹೇಳಿದರು.
ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಮ್ಮ ಪಕ್ಷವೇ ಬೇರೆ, ಸಿದ್ದರಾಮಯ್ಯ ಅವರ ಪಕ್ಷವೇ ಬೇರೆ. ಅಹಿಂದ ಅವರ ಪಕ್ಷಕ್ಕೆ ಸೀಮಿತವಾಗಿರುವುದು. ಜನಕ್ಕೆ ಏನು ಮುಟ್ಟಿಸಬೇಕೋ, ತಿಳಿಹೇಳಬೇಕೋ, ಜನರ ವಿಶ್ವಾಸವನ್ನು ಗಳಿಸುವಂತಹ ಕೆಲಸ ಬಿಜೆಪಿಯದ್ದು. ಸಿದ್ದರಾಮಯ್ಯರಿಗೂ ನಮಗೂ ಯಾವುದೇ ಸಂಭಂದವಿಲ್ಲ ಎಂದು ಸ್ಪಷ್ಟಪಡಿಸಿದರು.
ಅಹಿಂದ ಹೋರಾಟದಿಂದ ಬಿಜೆಪಿಗೆ ಯಾವುದೇ ರೀತಿಯ ಡ್ಯಾಮೇಜ್ ಆಗುವುದಿಲ್ಲ. ಕಾಂಗ್ರೆಸ್ನಲ್ಲಿ ಮುಖ್ಯಮಂತ್ರಿ ಆಗುವ ವಿಚಾರಕ್ಕೆ, ನಾಯಕರುಗಳ ಮಧ್ಯೆ ಕಿತ್ತಾಟ ನಡೆಯುತ್ತಿದೆ. ಇದರಿಂದ ಜನರು ಇವತ್ತು ಬಿಜೆಪಿ ಪರವಾಗಿದ್ದಾರೆ. ಜನರು ಬಿಜೆಪಿಗೆ ಅಧಿಕಾರ ನೀಡಬೇಕೆಂದು ತೀರ್ಮಾನ ಮಾಡಿದ್ದಾರೆ ಎಂದು ಹೇಳಿದರು.
ಇನ್ನು ಮೀಸಲಾತಿ ಹೋರಾಟಕ್ಕೆ ಸಂಭಂಧಿಸಿದಂತೆ ಮಾತನಾಡಿದ ಅವರು, ಆಯಾ ಜಾತಿಗಳ ಸೌಲಭ್ಯಕ್ಕಾಗಿ ಹೋರಾಟ ಮಾಡುತ್ತಿದ್ದಾರೆ. ಆರ್.ಎಸ್.ಎಸ್ ಹಾಗೂ ಕುರುಬ ಸಮಾಜಕ್ಕೆ ಯಾವುದೇ ಸಂಭಂಧವಿಲ್ಲ. ಯಾವ ಲೆಕ್ಕಾಚಾರದಲ್ಲಿ ಸಿದ್ದರಾಮಯ್ಯ ಅವರು ಕುರುಬ ಸಮಾಜ ಹಾಗೂ ಆರ್.ಎಸ್.ಎಸ್ ನಡುವೆ ಸಂಬಂಧ ಕಲ್ಪಿಸುತ್ತಿದ್ದಾರೋ ಗೊತ್ತಿಲ್ಲ. ಅವರಿಗೆ ಮಾತನಾಡುವುದಕ್ಕೆ ಏನೋ ಒಂದು ಬೇಕು ಅಷ್ಟೆ. ಆದ್ರೆ ಅದು ವಾಸ್ತವವಾಗಿ ಇರುವುದಿಲ್ಲ ಎಂದು ಲೇವಡಿ ಮಾಡಿದರು.