ಕೋಲಾರ: ಗ್ರಾಮೀಣ ಭಾಗದ ಜನರಿಗೋಸ್ಕರ ಜಾಯ್ ಇಡಿಯಸ್ ಎವಿಷನ್ ಹಾಗೂ ಡೆಕ್ಕನ್ ಚಾರ್ಜ್ ಎಂಬ ಸಂಸ್ಥೆಗಳು ದೇಶದಲ್ಲೇ ಮೊದಲ ಬಾರಿಗೆ ಹೆಲಿಕಾಪ್ಟರ್ ಜಾಯ್ ರೈಡ್ ಕಾರ್ಯಕ್ರಮ ಆಯೋಜನೆ ಮಾಡಿದ್ದರಿಂದ ಜಿಲ್ಲೆಯ ಜನರು ಸ್ವತಃ ಸುತ್ತು ಹಾಕುವ ಮೂಲಕ ಎಂಜಾಯ್ ಮಾಡಿದರು.
ಈ ಎರಡು ಸಂಸ್ಥೆಗಳು ಸೇರಿ ಗ್ರಾಮೀಣ ಭಾಗದ ಜನರಿಗೆ ಕಡಿಮೆ ದರದಲ್ಲಿ ಪ್ರಯಾಣಿಸುವ ಅವಕಾಶ ಕಲ್ಪಿಸಿದ್ದರಿಂದ ಕೊರೊನಾ ಕಾಲದಲ್ಲಿ ಮನೆಯಲ್ಲೇ ಬಂಧಿಯಾಗಿ ಬೋರ್ ಹೊಡೆದು ಹೋಗಿದ್ದ ಜನರು ಇಂದು ಹಕ್ಕಿಯಂತೆ ಹಾರಿ ಎಂಜಾಯ್ ಮಾಡಿದ್ದಾರೆ.
ಇಲ್ಲಿನ ಜನರು ಸಿಎಂ ಇಲ್ಲವೇ ಬೇರೆ ಯಾರಾದರೂ ಸಿನಿಮಾ ನಟರು ಬಂದಾಗ ದೂರದಲ್ಲಿ ನಿಂತು ಹೆಲಿಕಾಪ್ಟರ್ಗಳನ್ನು ನೋಡುತ್ತಿದ್ದರೇ ಹೊರತು, ಒಮ್ಮೆಯೂ ಹೆಲಿಕಾಪ್ಟರ್ನಲ್ಲಿ ಪ್ರಯಾಣಿಸುವ ಅವಕಾಶ ಪಡೆದಿರಲಿಲ್ಲ. ಹೀಗಾಗಿ ದೇಶದಲ್ಲೇ ವಿಮಾನ ಹಾಗೂ ಹೆಲಿಕಾಪ್ಟರ್ ಪ್ರಯಾಣ ಕೇವಲ ಹಣವಂತರಿಗೆ ಮಾತ್ರ ಅನ್ನೋ ಭಾವನೆ ಹೋಗಲಾಡಿಸಬೇಕು ಅನ್ನೋ ನಿಟ್ಟಿನಲ್ಲಿ ಇಡಿಯಸ್ ಎವಿಯೇಷನ್ ಸಂಸ್ಥೆ ಇದೇ ಮೊದಲ ಬಾರಿಗೆ ಗ್ರಾಮೀಣ ಬಾಗದಲ್ಲಿಯೂ ಇಂತಹ ಕಾರ್ಯಕ್ರಮ ಆಯೋಜನೆ ಮಾಡಿ ಗಮನ ಸೆಳೆಯಿತು.
ಗ್ರಾಮೀಣ ಭಾಗದ ಜನರಿಗೋಸ್ಕರ ಭರ್ಜರಿ ಆಫರ್ ನೀಡಿದ ಸಂಸ್ಥೆ, ಹದಿನೈದು ನಿಮಿಷಗಳ ಒಂದು ರೈಡ್ಗೆ 4,500 ರೂ ನಿಗದಿ ಮಾಡಿತ್ತು. ಇದರಿಂದ ಸಂತಸಗೊಂಡ ಜನರು ಉತ್ತಮ ರೆಸ್ಪಾನ್ಸ್ ನೀಡಿದ್ದಾರೆ. ಮುನ್ನೆಚ್ಚರಿಕೆಯ ಕ್ರಮವಾಗಿ ಪೊಲೀಸ್ ಇಲಾಖೆ ಸೇರಿದಂತೆ ಅಗ್ನಿಶಾಮಕ ದಳದ ಸಿಬ್ಬಂದಿಯನ್ನ ನೇಮಕ ಮಾಡಿ ವ್ಯವಸ್ಥಿತವಾಗಿ ಕಾರ್ಯಕ್ರಮ ರೂಪಿಸಲಾಗಿತ್ತು.