ಕೋಲಾರ: ಮಂಗಳವಾರ ಜಿಲ್ಲೆಯಲ್ಲಿ ಮಾಜಿ ಸಚಿವ ವರ್ತೂರು ಪ್ರಕಾಶ್ ಅವರ ಹುಟ್ಟುಹಬ್ಬದ ಆಚರಣೆ ನಡೆಯಲಿದ್ದು, ಅದಕ್ಕಾಗಿ ಸಕಲ ತಯಾರಿ ಮಾಡಿಕೊಳ್ಳಲಾಗಿದೆ. ಸುಮಾರು 50 ಸಾವಿರಕ್ಕೂ ಹೆಚ್ಚು ಜನ ಜನ್ಮದಿನದ ಈ ಕಾರ್ಯಕ್ರಮದಲ್ಲಿ ಭಾಗಿಯಾಗುವ ನಿರೀಕ್ಷೆ ಇದೆ ಎಂದು ವರ್ತೂರು ಪ್ರಕಾಶ್ ತಿಳಿಸಿದ್ದಾರೆ.
ನಗರದ ಬೈರೇಗೌಡ ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಗಳವಾರ ನನಗೆ ಶುಭವಾದ ದಿನ, ಅದೃಷ್ಟದ ದಿನವೂ ಸಹ. ನಾನು ಹುಟ್ಟಿದ್ದು ಮಂಗಳವಾರ. ನಾಳೆ ನನ್ನ ಹುಟ್ಟುಹಬ್ಬವನ್ನ ಅಭಿಮಾನಿಗಳು, ಮುಖಂಡರು ಅದ್ಧೂರಿಯಾಗಿ ಮಾಡುತ್ತಿದ್ದಾರೆ. ಹುಟ್ಟುಹಬ್ಬದ ಜೊತೆಗೆ ಚುನಾವಣೆ ಸಮೀಪಿಸುತ್ತಿದೆ. ಹಾಗಾಗಿ ಈ ಅದ್ಧೂರಿ ಕಾರ್ಯಕ್ರಮದ ಜೊತೆಗೆ ರಾಜಕೀಯ ಶಕ್ತಿ ಪ್ರದರ್ಶನ ಕೂಡ ಇದೆ ಎಂದರು.
ಕೋಲಾರ ವಿಧಾನಸಭ ಕ್ಷೇತ್ರದ ೫೦ ಸಾವಿರ ಜನ ಸೇರುವ ನಿರೀಕ್ಷೆ ಇದ್ದು, ಮೇ ತಿಂಗಳಲ್ಲಿ ಚುನಾವಣೆ ಫಲಿತಾಂಶ ಇದೆ. ಆದರೇ ನಾಳೆಯೇ ಪಾಸಿಟಿವ್ ರಿಸಲ್ಟ್ ಸಿಗಲಿದೆ ಎಂದರು. ನನಗೂ ವಿಶ್ವಾಸವಿದೆ 50 ಸಾವಿರ ಜನ ಸೇರುತ್ತಾರೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ತೋಟಗಾರಿಕೆ ಸಚಿವ ಮುನಿರತ್ನ, ಅರೋಗ್ಯ ಸಚಿವ ಸುಧಾಕರ್, ಸಂಸದ ಮುನಿಸ್ವಾಮಿ ಭಾಗವಹಿಸಲಿದ್ದಾರೆ ಎಂದರು.
ಕಾರ್ಯಕರ್ತರೆಲ್ಲ ಆಶೀರ್ವಾದ ಇದೆ. ಹುಟ್ಟುಹಬ್ಬದಂದೇ ಸಾರ್ವತ್ರಿಕ ಚುನಾವಣೆಯ ಫಲಿತಾಂಶ ಸಿಗಲಿದೆ. ಕಳೆದ ಬಾರಿ ಮೂರನೆ ಸ್ಥಾನ ಪಡೆದಿದ್ದಿರಲ್ಲ ಅನ್ನೋ ಪ್ರಶ್ನೆಗೆ ಉತ್ತರಿಸಿದ ವರ್ತೂರು, ಕಳೆದ ಬಾರಿ ನಾನು ಚುನಾವಣೆ ಸ್ಪರ್ಧೆ ಮಾಡಿಲ್ಲ, ಅದಕ್ಕೆ ನಾನು ಏಜೆಂಟ್ ಫಾರಂ ಕೊಟ್ಟಿಲ್ಲ ಎಂದು ಸಮಜಾಯಿಶಿ ನೀಡಿದರು. ಹುಟ್ಟುಹಬ್ಬದ ಬಳಿಕ ಕ್ಷೇತ್ರದಲ್ಲಿ ನಾಲ್ಕು ತಿಂಗಳ ಅಭಿವೃದ್ಧಿ ಕೆಲಸ ಮಾಡುವೆ, ಕೋಲಾರ ಕ್ಷೇತ್ರದ ಅಭ್ಯರ್ಥಿ ಎಂದು ನಾನು ಹೇಳಲ್ಲ, ಆದರೇ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ, ಬೊಮ್ಮಾಯಿ ಅವರೆಲ್ಲಾ ತೀರ್ಮಾನ ಮಾಡುತ್ತಾರೆ.
ಪಕ್ಷ ಯಾರನ್ನು ಅಭ್ಯರ್ಥಿ ಮಾಡಿದರೂ ಅವರ ಪರವಾಗಿ ನಾನು ಕೆಲಸ ಮಾಡುವೆ. ನನಗೆ ಟಿಕೆಟ್ ಕೊಟ್ಟರೇ ನಾನು, ಇಲ್ಲಾ ಅಂದ್ರೆ ಬೇರೆಯವರಿಗೆ ಕೊಟ್ರೆ ಅವರ ಪರವಾಗಿ ಕೆಲಸ ಮಾಡುವೆ. ಹಿಂದುತ್ವದ ಬಗ್ಗೆ ಹೆಮ್ಮೆ ಇದೆ, ಅಲ್ಪಸಂಖ್ಯಾತರು ದೇಶದ ಜನರೇ, ಹಿಂದುತ್ವದ ಮೇಲೆ, ಭಾರತದ ಮೇಲೆ ಅಭಿಮಾನ ಇದ್ರೆ ಅವರನ್ನು ಸಹ ಪಕ್ಷಕ್ಕೆ ಸ್ವಾಗತ ಮಾಡುವೆ ಎಂದು ಹೇಳಿದರು.
ಇದನ್ನೂ ಓದಿ: ಚುನಾವಣೆ ಬಳಿಕ ಬಿಜೆಪಿ ನಮ್ಮ ಪಕ್ಷದ ಬಾಗಿಲಿಗೇ ಬರಬೇಕು: ಹೆಚ್ಡಿಕೆಯಿಂದ ಸಮ್ಮಿಶ್ರ ಸರ್ಕಾರ ರಚನೆ ಸುಳಿವು?