ಕೋಲಾರ: ಮಾಜಿ ಸಚಿವ ವರ್ತೂರು ಪ್ರಕಾಶ್ ಕಿಡ್ನಾಪ್ ಪ್ರಕರಣದಲ್ಲಿ ಭಾಗಿಯಾಗಿದ್ದ ಆರು ಜನ ಕಿಡ್ನ್ಯಾಪರ್ಸ್ಅನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಇಂದು ಕೋಲಾರದ ಎಸ್ಪಿ ಕಚೇರಿಯಲ್ಲಿ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಐಜಿ ಸೀಮಂತ್ ಕುಮಾರ್ ಸಿಂಗ್, ಪ್ರಕರಣದ ಆರು ಆರೋಪಿಗಳನ್ನ ಬಂಧಿಸಿರುವುದಾಗಿ ಮಾಹಿತಿ ನೀಡಿದ್ರು. ಕಿಂಗ್ಪಿನ್ ಕವಿರಾಜ್, ಎಸ್. ಲಿಖಿತ್, ಉಲ್ಲಾಸ್, ಮನೋಜ್, ರಾಘವೇಂದ್ರ, ಪ್ರವೀಣ್ ಬಂಧಿತ ಆರೋಪಿಗಳಾಗಿದ್ದಾರೆ. ಬಂಧಿತರಿಂದ ಅಪಹರಣಕ್ಕೆ ಬಳಸಲಾಗಿದ್ದ ಮಾರುತಿ ಕಾರುಗಳು ಹಾಗೂ ಬೈಕ್ಗಳನ್ನ ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದ್ದಾರೆ.
ಅಪಹರಣಾಕಾರರು ವರ್ತೂರು ಪ್ರಕಾಶ್ರ ಚಲನವಲನ ಹಾಗೂ ಕಾಫಿ ಡೇ ಬಳಿ ಹಣ ಪಡೆಯಲು ಬೈಕ್ ಬಳಸಲಾಗಿದೆ. ಅಲ್ಲದೆ ಕಾರಿನಲ್ಲಿ ವರ್ತೂರು ಪ್ರಕಾಶ್ ಅವರನ್ನ ಕೂರಿಸಿಕೊಂಡು ಹೋಗಿದ್ದ ಆರೋಪಿಗಳು, ಎರಡು ಕಾರುಗಳನ್ನ ತಮ್ಮ ಓಡಾಟಕ್ಕಾಗಿ ಬಳಸಿದ್ದಾರೆ. ಕೃತ್ಯಕ್ಕಾಗಿ ನಾಲ್ಕು ಲಾಂಗ್, ಒಂದು ಮಚ್ಚು, ಮೂರು ಚಾಕು, ಬೇಸ್ಬಾಲ್, ಐದು ಮೊಬೈಲ್ ಫೋನ್ ಬಳಸಿದ್ದು, ಇವುಗಳ ಜೊತೆಗೆ ಸುಮಾರು 20 ಲಕ್ಷದ 50 ಸಾವಿರ ಹಣವನ್ನ ಬಂಧಿತರಿಂದ ವಶಕ್ಕೆ ಪಡೆಯಲಾಗಿದೆ.
ನವೆಂಬರ್ 25 ರಂದು ಮಾಜಿ ಸಚಿವ ವರ್ತೂರು ಪ್ರಕಾಶ್, ಕೋಲಾರದ ಬೆಗ್ಗಿ ತೋಟದ ಮನೆಯಿಂದ ಅಪಹರಣವಾಗಿದ್ದರು. ಈ ಪ್ರಕರಣ ಭೇದಿಸಲು 25 ಜನರ ವಿಶೇಷ ಪೊಲೀಸ್ ತಂಡ ರಚಿಸಲಾಗಿತ್ತು. ಮಿಂಚಿನ ಕಾರ್ಯಾಚರಣೆ ನಡೆಸಿದ ಈ ಪೊಲೀಸ್ ತಂಡ ಮಹಾರಾಷ್ಟ್ರ, ಆಂಧ್ರ ಪ್ರದೇಶ, ತಮಿಳುನಾಡಿನಲ್ಲಿ ಅಡಗಿದ್ದ ಅಪಹರಣ ಪ್ರಕರಣದ ಆರೋಪಿಗಳನ್ನ ಬಂಧಿಸಿದೆ. ಆರೋಪಿಗಳನ್ನು ಬಂಧಿಸಿದ ಪೊಲೀಸ್ ಸಿಬ್ಬಂದಿಗೆ ಕ್ಯಾಶ್ ಅವಾರ್ಡ್ ಮತ್ತು ಸರ್ಟಿಫಿಕೇಟ್ ನೀಡಲಾಗಿದೆ.
ಇದನ್ನೂ ಓದಿ: ವರ್ತೂರು ಪ್ರಕಾಶ್ ಅಪಹರಣ ಪ್ರಕರಣ: ತನಿಖೆ ಚುರುಕು