ಕೋಲಾರ: ಜಿಲ್ಲೆಯಾದ್ಯಂತ ಅವೈಜ್ಞಾನಿಕವಾಗಿ ರೈಲ್ವೆ ಅಂಡರ್ ಪಾಸ್ ನಿರ್ಮಾಣ ಮಾಡಿರುವುದನ್ನು ಖಂಡಿಸಿ ಕೋಲಾರ ಜಿಲ್ಲೆ ಬಂಗಾರಪೇಟೆ ಪಟ್ಟಣದಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಬಂಗಾರಪೇಟೆ ಪಟ್ಟಣದ ಕುಂಬಾರಪಾಳ್ಯದಲ್ಲಿ ಅವೈಜ್ಞಾನಿಕವಾಗಿ ನಿರ್ಮಾಣ ಮಾಡಿರುವ ರೈಲ್ವೆ ಅಂಡರ್ ಪಾಸ್ನಲ್ಲಿ ನೀರು ತುಂಬಿಕೊಂಡಿದ್ದು, ನಿನ್ನೆ ನೀರಿನಲ್ಲಿ ಆಟವಾಡಲು ಹೋಗಿದ್ದ ಮೂವರು ಮಕ್ಕಳು ನೀರಿನಲ್ಲಿ ಮುಳಗಿ ಸಾವನ್ನಪ್ಪಿದ್ದಾರೆ. ಆದರೆ ಇನ್ನೂ ನೀರಿನಲ್ಲಿ ಮುಳಗಿ ಮೃತಪಟ್ಟ ಮಕ್ಕಳ ಕುಟುಂಬಸ್ಥರಿಗೆ ಸೂಕ್ತ ಪರಿಹಾರ ಘೋಷಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲೆಯಾದ್ಯಂತ ಅವೈಜ್ಞಾನಿಕವಾಗಿ ಅಂಡರ್ ಪಾಸ್ ನಿರ್ಮಾಣ ಮಾಡಿರುವ ಎಂಜಿನಿಯರ್ ಹಾಗೂ ಗುತ್ತಿಗೆದಾರರ ವಿರುದ್ಧ ಗೂಂಡಾ ಕಾಯ್ದೆ ಅಡಿ ದೂರು ದಾಖಲಿಸುವಂತೆ ರೈತ ಸಂಘದ ಕಾರ್ಯಕರ್ತರು ಈ ವೇಳೆ ಒತ್ತಾಯಿಸಿದರು.