ಕೋಲಾರ: ಕಳೆದ ಕೆಲವು ತಿಂಗಳಿನಿಂದ ರೈತರ ಬೆಳೆಗಳ ಮೇಲೆ ದಾಳಿ ಮಾಡಿ ಲಕ್ಷಾಂತರ ರೂಪಾಯಿ ಬೆಳೆಗಳನ್ನು ನಾಶ ಮಾಡುತ್ತಿದ್ದ ಕಾಡಾನೆಗಳ ಹಿಂಡು, ಇದೀಗ ಮತ್ತೋರ್ವನ ಬಲಿ ಪಡೆದಿವೆ.
ಕಳೆದ ಹಲವು ವರ್ಷಗಳಿಂದ ಕೋಲಾರ ಜಿಲ್ಲೆಯ ಗಡಿಯಲ್ಲಿ ದೊಡ್ಡ ತಲೆನೋವಾಗಿ ಪರಿಣಮಿಸಿರುವ ಕಾಡಾನೆಗಳ ಹಾವಳಿ ಮುಂದುವರಿದಿದೆ. ತಮಿಳುನಾಡಿನಿಂದ ಬಂದಿರುವ ಆನೆಗಳ ಹಿಂಡನ್ನು ಕಾಡಿಗಟ್ಟಲು ಅರಣ್ಯ ಇಲಾಖೆ ಸಿಬ್ಬಂದಿ ಹಗಲಿರುಳು ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಇದರ ಪರಿಣಾಮ ಕಳೆದೆರಡು ದಿನಗಳ ಹಿಂದೆ ವ್ಯಕ್ತಿಯೋರ್ವನ ಮೇಲೆ ಆನೆ ಹಿಂಡು ದಾಳಿ ಮಾಡಿದ್ದಲ್ಲದೆ ಲಕ್ಷಾಂತರ ರೂಪಾಯಿ ಮೌಲ್ಯದ ಬೆಳೆ ನಾಶ ಮಾಡಿವೆ.
ಕೋಲಾರ ಜಿಲ್ಲೆ ಬಂಗಾರಪೇಟೆ ತಾಲೂಕಿನ ಕಾಮಸಮುದ್ರಂ ಹೋಬಳಿಯ ದೊಡ್ಡಪನ್ನಾಂಡಹಳ್ಳಿ ಗ್ರಾಮದ ಧರ್ಮೋಜಿರಾವ್ (58) ತೋಟದ ಬಳಿ ಹೋಗುವಂತಹ ಸಂದರ್ಭದಲ್ಲಿ ಆನೆಗಳ ಹಿಂಡು ದಾಳಿ ಮಾಡಿದ ಪರಿಣಾಮ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಬಂಗಾರಪೇಟೆ ತಾಲೂಕಿನ ಬೂದಿಕೋಟೆ, ಭೀಮಗಾನಹಳ್ಳಿ ಭಾಗಗಳಲ್ಲಿ ಟೊಮ್ಯಾಟೊ, ಚೆಂಡುಹೂವು, ಜೋಳ ಹಾಗೂ ರಾಗಿ ಬೆಳೆ ಸೇರಿದಂತೆ ಲಕ್ಷಾಂತರ ಮೌಲ್ಯದ ಬೆಳೆಗಳಿಗೆ ಹಾನಿಯುಂಟಾಗಿದೆ.
ಜೊತೆಗೆ ಇತ್ತೀಚಿಗೆ ಕಾಡಾನೆಗಳ ದಾಳಿಗೆ ಬಲಿಯಾಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿರುವ ಪರಿಣಾಮ ಸ್ಥಳೀಯರು ಆತಂಕಕ್ಕೊಳಗಾಗಿದ್ದಾರೆ.
ಪದೇ ಪದೇ ಆನೆ ದಾಳಿಯಿಂದ ಆಗುತ್ತಿರುವ ತೊಂದರೆಗಳನ್ನು ಸೂಕ್ಷ್ಮವಾಗಿ ಪರಿಗಣಿಸಿದ್ದು ಕೂಡಲೇ ಇದಕ್ಕೆ ಶಾಶ್ವತ ಪರಿಹಾರ ದೊರಕಿಸಿ, ಆನೆ ಕಾರಿಡಾರ್ ನಿರ್ಮಾಣ ಅಥವಾ ಎಲಿಫೆಂಟ್ ಬ್ಯಾರಿಕೇಡ್ ನಿರ್ಮಾಣಕ್ಕೆ ಅಥವಾ ಶಾಶ್ವತ ಯೋಜನೆ ರೂಪಿಸುವುದಾಗಿ ಸಂಬಂಧಪಟ್ಟ ಸಚಿವರು, ಅಧಿಕಾರಿಗಳು ಹೇಳುತ್ತಿದ್ದರೂ, ಇದುವರೆಗೂ ಬರೀ ಭರವಸೆಯಾಗಿಯೇ ಉಳಿದಿದೆ.
ಇದೇ ವೇಳೆ ಆನೆಗಳಿಂದ ಪದೇ ಪದೇ ದಾಳಿ ನಡೆಯುತ್ತಿದ್ದರೂ ಸರಿಯಾದ ಕ್ರಮ ವಸಹಿಸದ ಅಧಿಕಾರಿಗಳ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆನೆ ಹಾವಳಿಗೆ ಕಡಿವಾಣ ಹಾಕುವ ಮೂಲಕ ಮತ್ತಷ್ಟು ಜನರನ್ನು ಗಜಪಡೆಗಳು ಬಲಿ ಪಡೆಯುವ ಮುನ್ನ, ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಿದೆ.