ಕೋಲಾರ: ಕಳೆದೊಂದು ವಾರದಿಂದ ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಸಮೀಪವಿರುವ ಆಂಧ್ರ ಗಡಿಯಲ್ಲಿನ ಗುಲ್ಲಹಳ್ಳಿ ಗ್ರಾಮಗಳ ಸುತ್ತಮುತ್ತ ಸುಮಾರು ಆರು ಆನೆಗಳು, ಎರಡು ಗುಂಪುಗಳಾಗಿ ಬೀಡು ಬಿಟ್ಟಿವೆ.
ರಾಮಕುಪ್ಪಂ ಹಾಗೂ ಕೃಷ್ಣಗಿರಿ ಅರಣ್ಯ ಪ್ರದೇಶದಿಂದ ಬಂದಿರುವ ಈ ಆನೆಗಳ ಹಿಂಡು ಕರ್ನಾಟಕದ ಗಡಿ ಭಾಗದ ಜನರ ನಿದ್ದೆಗೆಡಿಸಿವೆ. ಜೊತೆಗೆ ಕಳೆದ ನಾಲ್ಕೈದು ದಿನಗಳಿಂದ ಜಿಲ್ಲೆಯ ಗಡಿಯಲ್ಲಿ ಬೀಡು ಬಿಟ್ಟಿರುವ ಆನೆ ಹಿಂಡು ನೂರಾರು ಎಕರೆಯಲ್ಲಿ ಬೆಳೆಯಲಾಗಿದ್ದ ವಿವಿಧ ಬೆಳೆಗಳನ್ನ ನಾಶ ಮಾಡಿವೆ. ಟೊಮ್ಯಾಟೊ, ಪಪ್ಪಾಯ, ಬೀನ್ಸ್, ಭತ್ತ ಸೇರಿದಂತೆ ರೈತರ ಪಂಪು ಮೋಟಾರ್, ಗುಡಿಸಲನ್ನ ಧ್ವಂಸ ಮಾಡಿದ್ದು ರೈತರು ಕಂಗಾಲಾಗಿದ್ದಾರೆ.
ಸದ್ಯ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲವಾದರೂ ಸುತ್ತಮುತ್ತಲಿನ ಗ್ರಾಮಸ್ಥರಲ್ಲಿ ಆತಂಕ ಮನೆಮಾಡಿದೆ. ಇನ್ನು ಆನೆ ಹಿಂಡನ್ನು ಕಾಡಿಗಟ್ಟಲು ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಹರಸಾಹಸ ಪಡುತ್ತಿದ್ದು, ಪಟಾಕಿ ಸಿಡಿಸಿ ಕಾಡಿಗಟ್ಟುವ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.