ಕೋಲಾರ: ಕೆಜಿಎಫ್‌ನಲ್ಲಿ ಗಾಂಜಾ ತಂದು ಮಾರಾಟ ಮಾಡುತ್ತಿದ್ದ ಉತ್ತರ ಪ್ರದೇಶ ಮೂಲದ ಇಬ್ಬರು ಆರೋಪಿಗಳನ್ನು ಕೆಜಿಎಫ್ ಪೊಲೀಸರು ಬಂಧಿಸಿದ್ದಾರೆ. ನಗರದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಅಂತಾರಾಜ್ಯ ಗಾಂಜಾ ಮಾರಾಟಗಾರರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಉತ್ತರ ಪ್ರದೇಶ ಮೂಲದ ಪೈಜಾಬ್ ಹಾಗೂ ಮೊಹ್ಮದ್ ಖಾಸಿಂ ಖಾನ್ ಬಂಧಿತರು. ಆರೋಪಿಗಳು ಕೆಜಿಎಫ್ ಸೇರಿದಂತೆ ಸುತ್ತಮುತ್ತ ಗ್ರಾಮೀಣ ಭಾಗದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದರು. ಇಂದು ನಗರದ ಹೊರ ವಲಯದ ಪಾರಂಡಹಳ್ಳಿ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದರು. ಈ ವೇಳೆ ದಾಳಿ ಮಾಡಿದ ಪೊಲೀಸರು ಆರೋಪಿಗಳಿಂದ ಒಂದೂವರೆ ಲಕ್ಷ ಮೌಲ್ಯದ 2 ಕೆ.ಜಿ 245 ಗ್ರಾಂ ಗಾಂಜಾವನ್ನು ವಶಕ್ಕೆ ಪಡೆದಿದ್ದಾರೆ. ಇನ್ನೂ ರಾಬರ್ಟ್‌ಸನ್ ಪೇಟೆ ಪೊಲೀಸರು ಈ ಬಗ್ಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದಾರೆ.
ಬೆಂಗಳೂರಲ್ಲಿ ಅನ್ಯ ರಾಜ್ಯದ ವಾಹನಗಳ ತಪಾಸಣೆ: ಬೆಂಗಳೂರಿಗೆ ಮಾದಕ ವಸ್ತುಗಳ ನುಸುಳುವಿಕೆಯನ್ನು ಪತ್ತೆ ಹಚ್ಚುವುದರ ಸಲುವಾಗಿ ನಗರಕ್ಕೆ ಪ್ರವೇಶಿಸುವ ಬಸ್ ಹಾಗೂ ಇತರ ವಾಹನಗಳನ್ನು ಶನಿವಾರ ಬೆಳಗ್ಗೆ ಸಿಸಿಬಿ ಪೊಲೀಸರು ತಪಾಸಣೆ ನಡೆಸಿದರು. ಬೆಂಗಳೂರು ಪೊಲೀಸರ War on Drugs ಅಭಿಯಾನದ ಭಾಗವಾಗಿ ಸಿಸಿಬಿಯ ಮಾದಕ ವಸ್ತು ನಿಗ್ರಹ ದಳದ ಪೊಲೀಸ್ ಅಧಿಕಾರಿಗಳು, ನಾರ್ಕೋಟಿಕ್ ಸ್ನಿಫರ್ ಶ್ವಾನಗಳನ್ನು ಬಳಸಿ ವಿಶೇಷ ಕಾರ್ಯಾಚರಣೆಗೆ ನಡೆಸಿದ್ದಾರೆ. ಹೊರರಾಜ್ಯದಿಂದ ಬರುವ ಬಸ್ ಹಾಗೂ ಇತರೇ ವಾಹನಗಳನ್ನು ನೆಲಮಂಗಲ ಟೋಲ್ ಸೇರಿದಂತೆ ನಗರದ ಗಡಿ ಭಾಗಗಳಲ್ಲಿ ತಡೆದು ತಪಾಸಣೆ ನಡೆಸಲಾಗಿದ್ದು, ಯಾವುದೇ ರೀತಿಯ ಮಾದಕ ವಸ್ತು ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
![ಅನ್ಯ ರಾಜ್ಯದ ವಾಹನಗಳ ತಪಾಸಣೆ](https://etvbharatimages.akamaized.net/etvbharat/prod-images/02-09-2023/kn-bng-05-war-on-drugs-7211560_02092023172348_0209f_1693655628_119.jpg)
ಪೊಲೀಸರ ಕೈಗೆ ಸಿಕ್ಕಿಬಿದ್ದ ಮೇಕೆ ಕಳ್ಳರು: ಮೇಕೆಗಳನ್ನು ಕದ್ದ ಬಗ್ಗೆ ದೂರು ದಾಖಲಾದ ಕೆಲವೇ ಗಂಟೆಗಳಲ್ಲಿ ಮಿಂಚಿನ ಕಾರ್ಯಾಚರಣೆ ನಡೆಸಿದ ಮೈಸೂರಿನ ದೊಡ್ಡ ಕವಲಂದೆ ಪೊಲೀಸರು, ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ವರುಣ ವಿಧಾನಸಭಾ ಕ್ಷೇತ್ರದ ನಂಜನಗೂಡು ತಾಲೂಕಿನ ಕೋಣನೂರು ಗ್ರಾಮದ ಬಿಳಿಗಿರಿ ರಂಗಯ್ಯ ಎಂಬವರಿಗೆ ಸೇರಿದ ಆರು ಮೇಕೆಗಳನ್ನು ಮನೆಯ ತುಸು ದೂರದಲ್ಲಿರುವ ತಾತ್ಕಾಲಿಕ ಕೊಟ್ಟಿಗೆಯಲ್ಲಿ ಪ್ರತಿ ದಿನ ಕಟ್ಟಿ ಹಾಕುತ್ತಿದ್ದರು. ಬೆಳಗಿನ ಜಾವ ಸುಮಾರು 2 ಗಂಟೆ ವೇಳೆ ಮೇಕೆಗಳು ಕಿರುಚಾಡಿದ ಶಬ್ದವನ್ನು ಕೇಳಿ ಎಚ್ಚರಗೊಂಡ ಮಾಲೀಕ, ಕೊಟ್ಟಿಗೆಗೆ ಹೋಗಿ ನೋಡುವಷ್ಟರಲ್ಲಿ, ಬೀಗ ಮುರಿದುಬಿದ್ದಿತ್ತು. ಒಳಗೆ ಹೋಗಿ ನೋಡಿದಾಗ 6 ಮೇಕೆಗಳ ಪೈಕಿ 4 ಮೇಕೆಗಳು ನಾಪತ್ತೆಯಾಗಿದ್ದವು.
ಮೇಕೆಗಳನ್ನು ಕಳ್ಳರು ಕದ್ದಿರಬಹುದು ಎಂದು ದೊಡ್ಡ ಕವಲಂದೆ ಠಾಣೆಗೆ ದೂರು ನೀಡಿದ್ದರು. ತಕ್ಷಣವೇ ಕಾರ್ಯ ಪ್ರವೃತ್ತರಾದ ಪೊಲೀಸ್ ಪಡೆ ಖಚಿತ ಮಾಹಿತಿಯನ್ನು ಆದರಿಸಿ, ವಾಹನ ತಪಾಸಣೆ ನಡೆಸುವ ವೇಳೆ, ಹನುಮನಪುರ ಗೇಟ್ ಬಳಿ ಕಾರಿನಲ್ಲಿ ತುಂಬಿಸಿಕೊಂಡು ಹೋಗುತ್ತಿದ್ದಾಗ ಮಾಲು ಸಮೇತ ಕಳ್ಳರು ಸಿಕ್ಕಿಬಿದ್ದಿದ್ದಾರೆ. ತಕ್ಷಣವೇ ಆರೋಪಿಗಳನ್ನು ಠಾಣೆಗೆ ಕರೆದು ತಂದು ವಿಚಾರಣೆ ನಡೆಸಿದಾಗ, ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಬಂಧಿತ ಆರೋಪಿಗಳು ಮಂಡ್ಯ ಜಿಲ್ಲೆಯ ಲಿಖಿತ್ ಗೌಡ ಮತ್ತು ವರುಣ ಎಂದು ತಿಳಿದುಬಂದಿದ್ದು, ಮುಂದಿನ ವಿಚಾರಣೆಗಾಗಿ ನಂಜನಗೂಡಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಬಿಳಿಗಿರಿ ರಂಗಯ್ಯ ಅವರಿಗೆ 4 ಮೇಕೆಗಳನ್ನು ಹಸ್ತಾಂತರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಡ್ರಗ್ಸ್ ಪೆಡ್ಲಿಂಗ್: ಮಂಗಳೂರು ಸಿಸಿಬಿ ಪೊಲೀಸರಿಂದ ನೈಜೀರಿಯಾದ ಮಹಿಳೆ ಬಂಧನ