ಕೋಲಾರ: ಸರ್ಕಾರಿ ಗೋ ಶಾಲೆಯಲ್ಲಿ ಹಸು, ಕರುಗಳು ಮೃತಪಟ್ಟಿರುವ ಘಟನೆ ನಡೆದಿದ್ದು, ಇದಕ್ಕೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಜಿಲ್ಲೆಯ ಕೆಜಿಎಫ್ ತಾಲೂಕಿನ ವೆಂಕಟಪುರ ಮಜರ ಗುಟ್ಟಹಳ್ಳಿ ಬಳಿ ಇರುವ ಸರ್ಕಾರಿ ಗೋ ಶಾಲೆಯಲ್ಲಿ ಹಸು ಹಾಗೂ ಕರುಗಳು ಮೃತ ಪಟ್ಟಿವೆ.
ದಿನದಿಂದ ದಿನಕ್ಕೆ ಹೆಚ್ಚಾಗಿ ಹಸು ಹಾಗೂ ಕರುಗಳು ಮೃತ ಪಟ್ಟಿದ್ದರೂ ಇಲ್ಲಿನ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದೇ ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಜನರು ಆರೋಪಿಸಿದ್ದಾರೆ.ಈ ಗೋಶಾಲೆಯಲ್ಲಿ ಸುಮಾರು 30ಕ್ಕೂ ಕ್ಕೂ ಹೆಚ್ಚು ಗೋವುಗಳು ಇದ್ದು, ಕೇವಲ ಒಂದು ತಿಂಗಳಿನಲ್ಲಿ 10ಕ್ಕೂ ಹೆಚ್ಚು ಹಸು ಮತ್ತು ಕರುಗಳು ಮೃತಪಟ್ಟಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಇನ್ನು ಮೃತ ಪಟ್ಟಿರುವ ಹಸು ಹಾಗೂ ಕರುಗಳನ್ನು ಪಕ್ಕದಲ್ಲಿ ಇರುವ ನೀಲಗಿರಿ ತೋಪಿನಲ್ಲಿ ಬಿಸಾಕಿದ್ದು ನಾಯಿಗಳಿಗೆ ಆಹಾರವಾಗಿದೆ. ಗುಟ್ಟಹಳ್ಳಿ ಸರ್ಕಾರಿ ಪಶು ವೈದ್ಯಧಿಕಾರಿಗಳು ನಿರ್ಲಕ್ಷ್ಯ ತೋರಿದ್ದರಿಂದ ಈ ಘಟನೆ ನಡೆಯುತ್ತಿದೆ ಎಂದು ಸ್ಥಳೀಯ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಾಗಾಗಿ ಸಂಬಂಧಪಟ್ಟ ಅಧಿಕಾರಿಗಳು ಗೋ ಶಾಲೆಯಲ್ಲಿ ಹಸು, ಕರುಗಳ ಸಾವಿನ ತನಿಖೆ ಮಾಡಿ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯ ಮಾಡಿದ್ದಾರೆ. ಗಂಡು ಕರುಗಳಿಗೆ ಜನ್ಮ ನೀಡಿದ ವೇಳೆ ಹಸುಗಳು ಮೃತಪಡುತ್ತಿದ್ದು, ಪಿಡ್ಸ್ನಿಂದ ಕೆಲ ಹಸುಗಳು ಮೃತಪಟ್ಟಿವೆ. ಅಲ್ಲದೇ ಅಲ್ಲಿ ಕೆಲಸ ಮಾಡುತ್ತಿದ್ದ ಮ್ಯಾನೆಜರ್ ಸಹ ಸರಿಯಾಗಿಲ್ಲದ ಹಿನ್ನೆಲೆ ಆತನನ್ನ ವರ್ಗಾವಣೆ ಮಾಡಲಾಗಿದೆ ಅನ್ನೋದು ಪಶುಸಂಗೋಪನೆ ಇಲಾಖೆ ಉಪನಿರ್ದೇಶಕ ತುಳಸಿರಾಮ್ ಅವರ ಮಾತಾಗಿದೆ.
ಇದನ್ನೂ ಓದಿ: ಕೊಪ್ಪಳದಲ್ಲಿ ವಿಚಿತ್ರ ಕಾಯಿಲೆ.. ನೂರಾರು ಜಾನುವಾರುಗಳ ಸರಣಿ ಸಾವು