ಕೋಲಾರ: ಮಲೇಷಿಯಾದಿಂದ ಬಂದ ವ್ಯಕ್ತಿಯೊಬ್ಬನ ಕ್ವಾರಂಟೈನ್ ಉಲ್ಲಂಘನೆ ಹಾಗೂ ಬೆಂಗಳೂರಿನ ಆರೋಗ್ಯ ಇಲಾಖೆ ಅಧಿಕಾರಿಗಳ ಎಡವಟ್ಟಿನಿಂದ ಬಂಗಾರಪೇಟೆಯಲ್ಲಿ ಆತಂಕ ಶುರುವಾಗಿದೆ.
ಮೇ 22 ರಂದು ಹೊರ ದೇಶದಲ್ಲಿದ್ದವರನ್ನು ಭಾರತಕ್ಕೆ ಕರೆ ತರಲಾಗಿತ್ತು. ಆ ಪೈಕಿ ಮಲೇಷಿಯಾದಿಂದ ಬಂದಿದ್ದ ಬಂಗಾರಪೇಟೆ ಮೂಲದ ಟೆಕ್ಕಿ, ಪಿ3186 ಕೂಡಾ ಒಬ್ಬ. ಆತನನ್ನು ಬೆಂಗಳೂರಿನ ಹೋಟೆಲ್‌ವೊಂದರಲ್ಲಿ ಕ್ವಾರಂಟೈನ್ ಮಾಡಲಾಗಿತ್ತು. ಬಳಿಕ ಮೇ 27ರಂದು ಆ ವ್ಯಕ್ತಿಯ ಗಂಟಲು ದ್ರವ ಹಾಗೂ ರಕ್ತದ ಮಾದರಿ ಸಂಗ್ರಹಿಸಲಾಗಿತ್ತು. ಆದರೆ, ವರದಿ ಬರುವ ಮುನ್ನವೇ ಮೇ 29ರಂದು ಹೋಂ ಕ್ವಾರಂಟೈನ್ನಲ್ಲಿರಲು ಸೂಚನೆ ನೀಡಿ ಕಳುಹಿಸಲಾಗಿತ್ತು. ಪರೀಕ್ಷಾ ವರದಿ ಬರುವ ಮುನ್ನವೇ ಮನೆಗೆ ಕಳುಹಿಸಿ ಬೆಂಗಳೂರಿನ ಆರೋಗ್ಯ ಇಲಾಖೆ ಮಾಡಿದ ಎಡವಟ್ಟಿನಿಂದ, ಈಗ ಬಂಗಾರಪೇಟೆ ಪಟ್ಟಣದಲ್ಲಿ ಬಹುದೊಡ್ಡ ಆತಂಕವೊಂದು ಶುರುವಾಗಿದೆ.
ಬಂಗಾರಪೇಟೆಗೆ ಬಂದಿದ್ದ ಆ ವ್ಯಕ್ತಿ ತನ್ನ ವಯಸ್ಸಾದ ತಂದೆ-ತಾಯಿ ಜೊತೆಗಿದ್ದ. ಅಷ್ಟೇ ಅಲ್ಲ, ಅವರ ಮನೆ ಬಳಿ ಇರುವ ಸೂಪರ್ ಜೆಂಟ್ಸ್ ಪಾರ್ಲರ್ ಅನ್ನೋ ಸಲೂನ್ನಲ್ಲಿ ಹೇರ್ ಕಟ್ ಮಾಡಿಸಿಕೊಂಡಿದ್ದ. ಆದರೆ, ಮದ್ಯಾಹ್ನದ ಹೊತ್ತಿಗೆ ಈ ಟೆಕ್ಕಿಯ ವರದಿಯಲ್ಲಿ ಕೊರೊನಾ ಪಾಸಿಟಿವ್ ಬಂದಿದ್ದು, ಸದ್ಯ ಆತಂಕಕ್ಕೆ ಕಾರಣವಾಗಿದೆ.
ತಕ್ಷಣವೇ ಆತನನ್ನು ಕೋಲಾರದ ಕೋವಿಡ್-19 ಆಸ್ಪತ್ರೆಗೆ ದಾಖಲು ಮಾಡಿ, ಕುಟುಂಬದ ಮೂವರನ್ನು ಕ್ವಾರಂಟೈನ್ ಮಾಡಲಾಗಿದೆ. ಹಾಗೂ ಸಲೂನ್ ಶಾಪ್ನ ಮಾಲೀಕನನ್ನು ಕ್ವಾರಂಟೈನ್ ಮಾಡಿ, ಸೋಂಕಿತ ಟೆಕ್ಕಿ ಬಂದು ಹೋದ ನಂತರ ಶಾಪ್ಗೆ ಬಂದು ಹೋದವರ ಹುಡುಕಾಟ ಶುರು ಮಾಡಲಾಗಿದೆ. ಅಲ್ಲಿ ಹತ್ತಕ್ಕೂ ಹೆಚ್ಚು ಜನ ಬಂದು ಹೋಗಿರುವ ಮಾಹಿತಿ ಪಡೆದ ಅಧಿಕಾರಿಗಳು, ಬೇರೆ ದಾರಿ ಕಾಣದೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೈಕ್ ಹಿಡಿದು ಅನೌನ್ಸ್ ಮಾಡೋದಕ್ಕೆ ಆರಂಭಿಸಿದ್ರು. ಆ ನಂತರವೇ ಸುಮಾರು 8 ಜನರ ಮಾಹಿತಿ ಸಿಕ್ಕಿದೆ.
ಸದ್ಯ ವಿದೇಶದಿಂದ ಬಂದಿದ್ದ ಈ ಸೋಂಕಿತನಿದ್ದ ಬಂಗಾರಪೇಟೆ ಪಟ್ಟಣದ ವಿವೇಕಾನಂದ ನಗರದ ಪ್ರದೇಶವನ್ನು ನಿರ್ಬಂಧಿತ ಪ್ರದೇಶ ಎಂದು ಘೋಷಣೆ ಮಾಡಿ, ಪ್ರಮುಖ ರಸ್ತೆಗಳನ್ನು ಸೀಲ್ ಮಾಡಲಾಗಿದೆ. ಜೊತೆಗೆ ಇಡೀ ಏರಿಯಾಗೆ ಸೋಂಕು ನಿವಾರಕ ಸಿಂಪಡಿಸಲಾಗಿದ್ದು, ಮತ್ಯಾರಾದ್ರು ಸೋಂಕಿತ ಸಂಪರ್ಕ ಅಥವಾ ಈ ಸಲೂನ್ಗೆ ಬಂದು ಹೋಗಿದ್ದಾರಾ ಅನ್ನೋ ಹುಡುಕಾಡಲಾಗ್ತಿದೆ. ಇಂಥ ಆತಂಕದ ನಡುವೆಯೂ ಕೋಲಾರ ಜಿಲ್ಲಾ ಕೇಂದ್ರದಲ್ಲೂ ಕೂಡಾ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಪರಿಣಾಮ ಈಗಾಗಲೇ ಕೋಲಾರ ನಗರದ ನಾಲ್ಕು ಬಡಾವಣೆಗಳು ನಿರ್ಬಂಧಿತ ಪ್ರದೇಶವೆಂದು ಘೋಷಣೆ ಮಾಡಲಾಗಿದೆ.
ಕೋಲಾರದ ಗಾಂಧಿನಗರ, ಆರೋಹಳ್ಳಿ ಬಡಾವಣೆ, ಗೌರಿಪೇಟೆ ಹಾಗೂ ಕುರುಬರಪೇಟೆ ಬಡಾವಣೆಗಳು ಸೀಲ್ಡೌನ್ ಆಗಿವೆ. ಮತ್ತಷ್ಟು ಏರಿಯಾಗಳು ಇದೇ ರೀತಿ ಬಂದ್ ಆದ್ರೆ ಗತಿ ಏನು ಅನ್ನೋ ಭಯ ಕೂಡಾ ಜನರಲ್ಲಿ ಹಾಗೂ ಅಧಿಕಾರಿಗಳಲ್ಲಿ ಶುರುವಾಗಿದೆ.