ಕೋಲಾರ: ಕಳೆದ ಹಲವು ವರ್ಷಗಳಿಂದ ತಮಿಳುನಾಡು ಹಾಗೂ ಆಂಧ್ರದ ಗಡಿಯಿಂದ ಬರುವ ಗಜಪಡೆ ಬಂಗಾರಪೇಟೆ ತಾಲೂಕಿನ ಬೂದಿಕೋಟೆ, ಕಾಮಸಮುದ್ರ ಹೋಬಳಿಯ ಹತ್ತಾರು ಗ್ರಾಮಗಳು ಹಾಗೂ ಮಾಲೂರು ತಾಲೂಕಿನ ಕೆಲವು ಗ್ರಾಮಗಳ ರೈತರ ಬೆಳೆಗಳನ್ನು ಹಾಳು ಮಾಡಿ ಹೋಗುತ್ತಿವೆ.
ತೆಂಗಿನ ಮರಗಳು, ಬಾಳೆ ಗಿಡ, ಟೊಮ್ಯಾಟೊ, ಕ್ಯಾರೆಟ್, ಆಲೂಗೆಡ್ಡೆ, ಪಪ್ಪಾಯ, ರಾಗಿ, ಭತ್ತ ಸೇರಿದಂತೆ ಹತ್ತಾರು ಬಗೆಯ ಬೆಳೆಗಳನ್ನು ತಿಂದು ತೇಗಿವೆ. ಅಷ್ಟೇ ಅಲ್ಲದೆ, ವರ್ಷಕ್ಕೆ ನಾಲ್ಕೈದು ಜನ ರೈತರ ಜೀವಗಳನ್ನು ತೆಗೆಯುತ್ತಿವೆ.
ಪರಿಣಾಮ ಗಡಿ ಗ್ರಾಮಗಳ ಜನರು ನಿತ್ಯ ಭಯದಲ್ಲೇ ಜೀವನ ನಡೆಸುವ ಪರಿಸ್ಥಿತಿ ಎದುರಾಗಿದೆ. ಹಾಗಾಗಿ ಗಡಿಗ್ರಾಮಗಳ ಜನರು ಕಾಡಾನೆಗಳಿಂದ ಶಾಶ್ವತ ಪರಿಹಾರಕ್ಕಾಗಿ ಆಗ್ರಹಿಸಿದ್ದು, ಪರಿಣಾಮ ಕೋಲಾರ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಹಾಗೂ ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಶಿವಶಂಕರ್ ಸೇರಿದಂತೆ ಹಲವು ಅಧಿಕಾರಿಗಳು ಗಡಿ ಗ್ರಾಮಗಳಿಗೆ ಭೇಟಿ ನೀಡಿ ರೈತರ ಸಂಕಷ್ಟ ಆಲಿಸಿದರು. ಕೂಡಲೇ ಈ ಕಾಡಾನೆಗಳ ಹಾವಳಿಗೆ ಪರಿಹಾರ ಒದಗಿಸುವ ಭರವಸೆ ನೀಡಿದರು.
ಇದನ್ನೂ ಓದಿ: ಹೊಸ ಮನೆ ಅಂದಕ್ಕೆ ಅಡ್ಡಿಯಾದ ಹಳೆ ಮನೆ, ರಾತ್ರೋರಾತ್ರಿ ನೆಲಸಮ
ಅಧಿಕಾರಿಗಳ ಭೇಟಿ ವೇಳೆ ಗಡಿಗ್ರಾಮಗಳ ಜನರು ಅಧಿಕಾರಿಗಳಿಗೆ ತಮ್ಮ ಸಂಕಷ್ಟ ಹೇಳಿಕೊಂಡರು. ಕಳೆದ ಐದಾರು ವರ್ಷಗಳಲ್ಲಿ ಸುಮಾರು ಒಂದೂವರೆ ಕೋಟಿಗೂ ಅಧಿಕ ಮೌಲ್ಯದ ತೋಟಗಾರಿಕಾ ಬೆಳೆಗಳು ನಷ್ಟವಾಗಿವೆ. ಅದಕ್ಕೆ ತಕ್ಕಂತೆ ದಾಖಲೆ ಸಮೇತ ಅರಣ್ಯ ಇಲಾಖೆಗೆ ಮನವಿ ಮಾಡಿದ್ದಾರೆ. ಸರ್ಕಾರ ಈ ಬಿಡಿಗಾಸು ಪರಿಹಾರ ನೀಡುವುದು ಬೇಡ, ನಮಗೆ ಕಾಡಾನೆ ಹಾವಳಿಯನ್ನು ನಿಲ್ಲಿಸಿದರೆ ಸಾಕು ಎಂದು ತಮ್ಮ ಅಳಲು ತೋಡಿಕೊಂಡರು.