ಕೋಲಾರ : ನರಸಾಪುರದ ಕೈಗಾರಿಕಾ ವಲಯದ ಐಫೋನ್ ಬಿಡಿ ಭಾಗ ತಯಾರಿಕ ಕಂಪನಿ ವಿಸ್ಟ್ರಾನ್ನಲ್ಲಿ ಕಾರ್ಮಿಕರು ನಡೆಸಿದ ದಾಂಧಲೆಯಿಂದ ನೂರಾರು ಕೋಟಿ ರೂಪಾಯಿ ಮೌಲ್ಯದಷ್ಟು ಆಸ್ತಿ-ಪಾಸ್ತಿ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.
ನಿರುದ್ಯೋಗಿಗಳಾದ ಕಂಪನಿ ಸಿಬ್ಬಂದಿ :
ಘಟನೆಯಿಂದ ಕಂಪನಿಯ 11,500 ಕಾರ್ಮಿಕರು ಕೆಲಸ ಕಳೆದುಕೊಂಡು ನಿರುದ್ಯೋಗಿಗಳಾಗಿದ್ದಾರೆ. ಜಾಗತಿಕ ಹೂಡಿಕೆದಾರರು ರಾಜ್ಯದಲ್ಲಿ ಹೂಡಿಕೆ ಮಾಡಲು ಹಿಂದೆ ಮುಂದೆ ನೋಡುವ ಸ್ಥಿತಿ ಸಂಭವಿಸಬಹುದು. ಕಾರ್ಮಿಕರ ದಾಳಿಯಿಂದ ಕಂಪನಿಯ ನೂರಾರು ಕೋಟಿ ರೂಪಾಯಿ ಮೌಲ್ಯದ ಯಂತ್ರೋಪರಕರಣಗಳಿಗೆ ಹಾನಿಯಾಗಿದೆ. ನಷ್ಟದ ಪ್ರಮಾಣ ಅಂದಾಜಿಸಲು ಬೆಂಗಳೂರಿನ ತಜ್ಞರು ಆಗಮಿಸಿದ್ದಾರೆ. ದಾಳಿ ವೇಳೆ ಕಂಪನಿಯ ಲ್ಯಾಪ್ಟಾಪ್, ಫೋನ್ಗಳು ಕಳವಾಗಿದ್ದು, ಸುಮಾರು 15 ಕೋಟಿಗೂ ಅಧಿಕ ನಷ್ಟವನ್ನು ಅಂದಾಜಿಸಲಾಗಿದೆ. ನಿಖರ ನಷ್ಟದ ಪ್ರಮಾಣ ತನಿಖೆಯಿಂದ ತಿಳಿದು ಬರಲಿದೆ ಎಂದು ಕೋಲಾರ ಸಂಸದ ಎಸ್. ಮುನಿಸ್ವಾಮಿ ಹೇಳಿದರು.
ಇದನ್ನೂ ಓದಿ : ವಿಸ್ಟ್ರಾನ್ ಕಂಪನಿ ಮೇಲಿನ ದಾಳಿ ಪ್ರಕರಣ: 149 ಮಂದಿ ಕಾರ್ಮಿಕರ ಬಂಧನ ಕುರಿತು ಎಸ್ಪಿ ಮಾಹಿತಿ
ಈ ವಿಧ್ವಂಸಕ ಕೃತ್ಯದ ಸಂಬಂಧ ಇದುವರೆಗೆ 149 ಕಾರ್ಮಿಕರನ್ನು ಬಂಧಿಸಲಾಗಿದೆ. ಸಿಸಿಟಿವಿ ಕ್ಯಾಮರಾ ದೃಶ್ಯ, ವಾಟ್ಸ್ಆ್ಯಪ್ ಸಂಭಾಷಣೆ ಆಧರಿಸಿ ಕೃತ್ಯ ಎಸಗಿದವರನ್ನು ಬಂಧಿಸಲಾಗಿದೆ. 25 ಕಾರ್ಮಿಕರನ್ನು ವಿಚಾರಣೆಗೆ ಒಳಪಡಿಸಲಾಗಿದ್ದು, ಇನ್ನಷ್ಟು ಆಪಾದಿತರ ಬಂಧಿಸುವ ಸಾಧ್ಯತೆಯಿದೆ. ಬಂಧಿತರೆಲ್ಲರೂ ಯುವಕರೇ ಆಗಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ : ವಿಸ್ಟ್ರಾನ್ ಕಂಪನಿಯಲ್ಲಿ ಕಾರ್ಮಿಕರ ದಾಂದಲೆ: ಅಮಾಯಕರನ್ನು ಬಂಧಿಸದಂತೆ ಮನವಿ
ಪ್ರಕರಣದಲ್ಲಿ ಯಾವುದೇ ಅಮಾಯಕ ಕಾರ್ಮಿಕರನ್ನು ಬಂಧಿಸಿಲ್ಲ. ವಿಡಿಯೋ ಆಧರಿಸಿ ಮೂವರನ್ನು ಬಿಡುಗಡೆಗೊಳಿಸಲಾಗಿದೆ. ಕೃತ್ಯದಲ್ಲಿ ಭಾಗಿಯಾಗಿದ್ದ ಪ್ರತಿಯೊಬ್ಬರ ಮಾಹಿತಿ ಕಂಪನಿ ಸಿಬ್ಬಂದಿಯಿಂದ ಸಿಕ್ಕಿದ್ದು, 10 ಪೊಲೀಸ್ ತಂಡಗಳಿಂದ ವಿಚಾರಣೆ ನಡೆಸಲಾಗುತ್ತಿದೆ. ಜೊತೆಗೆ ಕಳವಾಗಿದ್ದ ಲ್ಯಾಪ್ ಟಾಪ್ ಹಾಗೂ ಮೊಬೈಲ್ಗಳನ್ನು ವಶಪಡಿಸಿಕೊಳ್ಳಲಾಗುತ್ತಿದೆ ಎಂದು ಕೋಲಾರ ಎಸ್ಪಿ ಕಾರ್ತಿಕ್ ರೆಡ್ಡಿ ತಿಳಿಸಿದ್ದಾರೆ.