ಕೋಲಾರ: ಜಿಲ್ಲೆಯಲ್ಲಿ ಲಂಚಬಾಕ ಅಧಿಕಾರಿಗಳಿಗೆ ಗಾಳ ಹಾಕುತ್ತಿದ್ದ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳೇ ಲಂಚದಾಹಕ್ಕೆ ಬಲಿಯಾದ್ರಾ ಅನ್ನೋ ಪ್ರಶ್ನೆ ಕಾಡಲಾರಂಭಿಸಿದ್ದು, ಎಸಿಬಿ ಅಧಿಕಾರಿಗಳ ವಿರುದ್ಧವೇ ಲಂಚದ ಆರೋಪ ಕೇಳಿ ಬಂದಿದೆ.
ಕೋಲಾರ ತಾಲೂಕಿನ ಸೂಲೂರು ಗ್ರಾಮ ಪಂಚಾಯ್ತಿಯ ಪಿಡಿಒ ಹರೀಶ್ರನ್ನು ಕೋಲಾರ ಎಸಿಬಿ ತಂಡ ಟ್ರ್ಯಾಪ್ ಮಾಡಿ ಜೈಲಿಗೆ ಕಳುಹಿಸಿತ್ತು. ಈ ಬೆನ್ನಲ್ಲೇ ಎಸಿಬಿ ಅಧಿಕಾರಿಗಳು ಟ್ರ್ಯಾಪ್ ಮಾಡಿರುವ ವಿಡಿಯೋ ಬಯಲಾಗಿದೆ. ಇನ್ನು ಪಿಡಿಒ ಅಧಿಕಾರಿ ಹರೀಶ್ ಹಣದ ಆಮಿಷ ಒಡ್ಡಿಲ್ಲ ಬದಲಾಗಿ ಸುಕಾ ಸುಮ್ಮನೆ ಅವರ ಮೇಲೆ ಎಸಿಬಿ ಅಧಿಕಾರಿಗಳು ಟ್ರ್ಯಾಪ್ ಮಾಡಿದ್ದಾರೆ. ಇದರಲ್ಲಿ ಎಸಿಬಿ ಅಧಿಕಾರಿಗಳದ್ದೇ ಕೈವಾಡವಿದೆ ಎಂದು ಆರೋಪಿಸಲಾಗಿದೆ.
ಹರೀಶ್ ಮೇಲೆ ದೂರು ನೀಡಿದ್ದ ಮಹಿಳೆಯೇ ಹರೀಶ್ ಕಾರಿನಲ್ಲಿ ಹಣ ಬಿಸಾಕಿ ಹೋಗಿದ್ದಾಳೆ. ಇದನ್ನೇ ಕಾದು ಕುಳಿತಿದ್ದ ಅಧಿಕಾರಿಗಳು ಹರೀಶ್ನನ್ನು ಬಂಧಿಸಿದ್ದಾರೆ ಎಂದು ಆರೋಪಿಸಿ ಎಸಿಬಿ ಅಧಿಕಾರಿಗಳ ವಿರುದ್ಧ ಪಿಡಿಒ ಸಂಘದ ಕಾರ್ಯಕರ್ತರು ಕೋಲಾರ ಜಿಲ್ಲಾ ಪಂಚಾಯ್ತಿ ಎದುರು ಪ್ರತಿಭಟನೆ ನಡೆಸಿದರು.
ಇತ್ತೀಚೆಗೆ ಎಸಿಬಿ ಅಧಿಕಾರಿಗಳು ಟ್ರ್ಯಾಪ್ ಮಾಡಿರುವ ಬಹುತೇಕ ಪ್ರಕರಣಗಳನ್ನ ನೋಡಿದರೆ, ಪದೇ ಪದೇ ಕೆಲವೇ ವ್ಯಕ್ತಿಗಳು ಅಧಿಕಾರಿಗಳ ವಿರುದ್ಧ ದೂರು ನೀಡುತ್ತಿದ್ದಾರೆ. ಅಲ್ಲದೆ ಆ ದೂರು ನೀಡಿತ್ತಿರುವ ವ್ಯಕ್ತಿಗೂ ದೂರಿಗೂ ಸಂಬಂಧವೇ ಇಲ್ಲ ಎಂದು ಹೇಳಲಾಗಿದೆ.
ಈ ರೀತಿ ಪದೇ ಪದೇ ದೂರು ನೀಡುತ್ತಿರುವ ಕೆಲವು ಮಂದಿಗೆ ಎಸಿಬಿ ಅಧಿಕಾರಿಗಳು ಇತ್ತೀಚೆಗೆ ಕಾರ್ಯಕ್ರಮವೊಂದನ್ನು ಆಯೋಜಿಸಿ ಸನ್ಮಾನ ಮಾಡಿದ್ದಾರೆ ಎನ್ನಲಾಗಿದೆ. ಇದರಿಂದ ಎಸಿಬಿ ಅಧಿಕಾರಿಗಳೇ ವ್ಯವಸ್ಥಿತಿ ತಂಡ ರೂಪಿಸಿ ಸರ್ಕಾರಿ ಅಧಿಕಾರಿಗಳನ್ನು ಬೆದರಿಸಿ ಹಣ ವಸೂಲಿ ಮಾಡುತ್ತಿದ್ದಾರಾ ಎನ್ನುವ ಅನುಮಾನ ವ್ಯಕ್ತವಾಗಿದೆ. ಹಾಗಾಗಿ ಪಿಡಿಒ ಸಂಘ ಪ್ರತಿಭಟನೆ ಮಾಡಿ ಎಸಿಬಿ ಅಧಿಕಾರಿಗಳ ವಿರುದ್ಧ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.