ಕೊಡಗು: ಜಿಲ್ಲೆಯಲ್ಲಿ ಚದುರಿದಂತೆ ವ್ಯಾಪಕ ಮಳೆಯಾಗುವ ಸಾಧ್ಯತೆ ಇರುವುದರಿಂದ ಜೂನ್ 12 ರಂದು ಯೆಲ್ಲೋ ಹಾಗೂ 13 ಮತ್ತು 14 ರಂದು ಆರೆಂಜ್ ಅಲರ್ಟ್ ಘೋಷಿಸಿ ಎಚ್ಚರಿಕೆಯಿಂದ ಇರುವಂತೆ ಜಿಲ್ಲಾಡಳಿತ ತಿಳಿಸಿದೆ.
ಈಗಾಗಲೇ ಜಿಲ್ಲೆಯಲ್ಲಿ ಮುಂಗಾರು ಪ್ರಾರಂಭವಾಗಿದೆ. ಹೀಗಾಗಿ ಒಳನಾಡು ಭಾಗದಲ್ಲಿ ಚದುರಿದಂತೆ ಹಾಗೂ ಅಲ್ಲಲ್ಲಿ ವ್ಯಾಪಕ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಜೂನ್ 12 ರಂದು 64.5 ಮಿ.ಮೀಟರ್ ನಿಂದ 115.5 ಮಿ.ಮೀಟರ್ ಪ್ರಮಾಣದ ಮಳೆ ಬೀಳುವ ಸಾಧ್ಯತೆಗಳಿವೆ. ಆರೆಂಜ್ ಅಲರ್ಟ್ ಅವಧಿಯಲ್ಲಿ 115.6 ಮಿ.ಮೀಟರ್ ನಿಂದ 204.4 ಮಿ.ಮೀಟರ್ ಮಳೆ ಬೀಳುವ ಸಾಧ್ಯತೆಗಳು ಇರುವುದರಿಂದ ಜನತೆ ಎಚ್ಚರಿಕೆಯಿಂದ ಇರಲು ಮನವಿ ಮಾಡಿದೆ.
ಪ್ರಾಕೃತಿಕ ವಿಕೋಪಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆಗಳು ಎದುರಾದರೆ ಜಿಲ್ಲಾಡಳಿತ ನೀಡಿರುವ 08272-221077 ತುರ್ತು ದೂರವಾಣಿ ಸಂಖ್ಯೆಗೆ ಕರೆ ಮಾಡಲು ಜಿಲ್ಲಾಧಿಕಾರಿ ಅನೀಸ್ ಕೆ.ಜಾಯ್ ತಿಳಿಸಿದ್ದಾರೆ.