ಕೊಡಗು : ಇಬ್ಬರು ಮಹಿಳೆಯರ ಮೇಲೆ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ದಾಳಿ ಮಾಡಿದ್ದರಿಂದಾಗಿ ಓರ್ವ ಮಹಿಳೆ ಸಾವನ್ನಪ್ಪಿದ್ದರೆ, ಇನ್ನೋರ್ವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ಟಿ ಶೆಟ್ಟಿಗೇರಿ ಗ್ರಾಮದಲ್ಲಿ ನಡೆದಿದೆ.
ಪೊನ್ನಂಪೇಟೆ ತಾಲೂಕಿನ ಟಿ ಶೆಟ್ಟಿಗೇರಿ ಗ್ರಾಮದ ಪ್ರೇಮಾ ಹಾಗೂ ಇವರ ಸಹೋದರಿ ವೇದಾ ಮೇಲೆ ದಾಳಿ ಮಾಡಲಾಗಿದೆ. ಈ ದಾಳಿಯಲ್ಲಿ ಪ್ರೇಮಾ ಸಾವನ್ನಪ್ಪಿದರೆ, ವೇದಾ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸೋಮಶೇಖರಪ್ಪ ಮತ್ತು ಪ್ರೇಮಾ ದಂಪತಿಗೆ ಮಕ್ಕಳಿಲ್ಲ. ತಿಂಗಳ ಹಿಂದೆ ಸೋಮಶೇಖರಪ್ಪ ಅನಾರೋಗ್ಯದಿಂದ ಸಾವನ್ನಪ್ಪಿದ್ದಾರೆ. ಪ್ರೇಮ ತನ್ನ ಕಾಫಿ ತೋಟದಲ್ಲಿ ಒಂಟಿ ಮನೆಯೊಳಗೆ ಒಬ್ಬಂಟಿಯಾಗಿದ್ದರು.
ತನ್ನ ಸಹೋದರಿ ಏಕಾಂಗಿಯಾಗಬಾರದು ಎಂಬ ಕಾರಣಕ್ಕೆ ದೂರದ ಬೆಂಗಳೂರಿನಲ್ಲಿದ್ದ ಸಹೋದರಿ ವೇದಾ ಮತ್ತು ಪತಿ ನಾರಾಯಣ ಪ್ರೇಮಾರ ಮನೆಗೆ ಬಂದು ಉಳಿದುಕೊಂಡಿದ್ದಾರೆ. ಇವರಿಬ್ಬರ ಮಗ ನವೀನ್ನನ್ನೇ ಪ್ರೇಮಾ ಕೂಡ ತಮ್ಮ ಮಗ ಅಂತಾ ಮಾತಲ್ಲೇ ದತ್ತು ತೆಗೆದುಕೊಂಡಿದ್ದರಂತೆ.
ಪ್ರೇಮಾಗೆ ಟಿ ಶೆಟ್ಟಿಗೇರಿ ಗ್ರಾಮದಲ್ಲಿ ಸುಮಾರು ನಾಲ್ಕು ಎಕರೆ ಉತ್ತಮ ಕಾಫಿ ತೋಟವಿದೆ. ಇದರ ಮಾರುಕಟ್ಟೆ ಮೌಲ್ಯವೇ ಇಂದು ಏನಿಲ್ಲವೆಂದರೂ 1.3 ಕೋಟಿ ರೂ. ಬಾಳುತ್ತದೆ. ಭಾನುವಾರ ಇವರ ಊರಿನವರ ಮದುವೆಯೊಂದಕ್ಕೆ ಪ್ರೇಮ ಮತ್ತು ಸಹೋದರಿ ವೇದ ಒಟ್ಟಾಗಿ ಹೋಗಿದ್ದರಂತೆ.
ವೇದಾರ ಪತಿ ನಾರಾಯಣ ಮನೆಯಲ್ಲೇ ಉಳಿದುಕೊಂಡಿದ್ದರಂತೆ. ಆದ್ರೆ, ಸೋಮವಾರ ಬೆಳಗ್ಗೆಯಾದ್ರೂ ಇಬ್ಬರು ಮನೆಗೆ ಬಂದಿಲ್ಲ. ಸೋಮವಾರ ಬೆಳಗ್ಗೆ ತೋಟಕ್ಕೆ ಕೆಲಸಕ್ಕೆಂದು ಬಂದ ಕಾರ್ಮಿಕರಿಗೆ ರಸ್ತೆಯಲ್ಲಿ ಇಬ್ಬರು ಮಹಿಳೆಯರು ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಾಣಿಸುತ್ತದೆ. ತಕ್ಷಣವೇ ಪೊಲೀಸರಿಗೆ ಕರೆ ಮಾಡಿ ತಿಳಿಸುತ್ತಾರೆ.
ಪೊಲೀಸರು ಬಂದು ನೋಡಿದರೆ ಇವರಿಬ್ಬರು ಪ್ರೇಮ ಮತ್ತು ವೇದಾ ಆಗಿರುತ್ತಾರೆ. ಇಬ್ಬರ ಮೇಲೆ ಕತ್ತಿಯಿಂದ ಬರ್ಬರವಾಗಿ ಹಲ್ಲೆ ಮಾಡಲಾಗಿರುತ್ತದೆ. ಈ ಘಟನೆಯಲ್ಲಿ ಪ್ರೇಮಾ ಸಾವನ್ನಪ್ಪಿದ್ದರೇ, ವೇದಾ ಜೀವನ್ಮರಣದ ಸ್ಥಿತಿಯಲ್ಲಿರುತ್ತಾರೆ. ಯಾರು ಇವರನ್ನು ಕೊಲೆ ಮಾಡಿದರು ಎಂಬುದು ಇದೀಗ ಯಕ್ಷ ಪ್ರಶ್ನೆಯಾಗಿದೆ. ಮೈಮೇಲಿನ ಆಭರಣಗಳು ಹಾಗೇ ಇವೆ. ವೇದಾ ತೀರಾ ಗಂಭೀರ ಸ್ಥಿತಿಯಲ್ಲಿದ್ದು, ಇವರು ಸುಧಾರಿಸಿಕೊಂಡ ಬಳಿಕವಷ್ಟೇ ದಾಳಿಕೋರನ ಪತ್ತೆಯಾಗಬಹುದು. ಇದು ಪ್ರೇಮಾರ ಆಸ್ತಿಗಾಗಿ ದಾಯಾದಿಗಳಿಂದ ನಡೆದ ಕೊಲೆ ಅಂತಾ ಕುಟುಂಬಸ್ಥರು ಆರೋಪಿಸಿದ್ದಾರೆ.