ಬೆಂಗಳೂರು: ಮಡಿಕೇರಿಯ ಕರ್ಣಂಗೇರಿ ಗ್ರಾಮದ ‘ಸ್ಟೋನ್ ಹಿಲ್’ ಪ್ರದೇಶದ ಬದಲು ತ್ಯಾಜ್ಯ ವಿಲೇವಾರಿಗಾಗಿ ಗುರುತಿಸಿರುವ ಪರ್ಯಾಯ ಪ್ರದೇಶವನ್ನು ಪರಿಶೀಲಿಸಿ ವರದಿ ಸಲ್ಲಿಸುವಂತೆ ಹೈಕೋರ್ಟ್ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ನಿರ್ದೇಶಿಸಿದೆ.
ಮಡಿಕೇರಿ ನಗರ ಸಮೀಪದ ಐತಿಹಾಸಿಕ ಪ್ರದೇಶ ಸ್ಟೋನ್ ಹಿಲ್ ಗುಡ್ಡದ ಮೇಲೆ ನಗರಸಭೆ ಅನಧಿಕೃತವಾಗಿ ಮತ್ತು ಅವೈಜ್ಞಾನಿಕವಾಗಿ ತ್ಯಾಜ್ಯ ಸುರಿಯುತ್ತಿರುವ ಕ್ರಮ ಪ್ರಶ್ನಿಸಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಈ ವೇಳೆ, ಸ್ಟೋನ್ ಹಿಲ್ ಮೇಲೆ ತ್ಯಾಜ್ಯ ವಿಲೇವಾರಿ ಸ್ಥಗಿತಕ್ಕೆ ಪರ್ಯಾಯ ನಿವೇಶನ ಗುರುತಿಸಲಾಗಿದೆ ಎಂದು ನಗರಸಭೆ ಪರ ವಕೀಲರು ಪೀಠಕ್ಕೆ ಮಾಹಿತಿ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ಸ್ಥಳ ಪರಿಶೀಲನೆ ನಡೆಸದೆ ವರದಿ ಕೊಡಲಾಗಿದೆ. ಹಾಗಾಗಿ, ಪರ್ಯಾಯ ನಿವೇಶನ ಗುರುತಿಸುವಾಗ ಘನತ್ಯಾಜ್ಯ ನಿರ್ವಹಣಾ ನಿಯಮಗಳು-2016 ಮತ್ತು ಕೇಂದ್ರ ಸರ್ಕಾರದ ಕೈಪಿಡಿಯಲ್ಲಿ ಸೂಚಿಸಲಾಗಿರುವ ಮಾನದಂಡಗಳನ್ನು ಪಾಲಿಸಲಾಗಿದೆಯೇ ಎಂಬ ಬಗ್ಗೆ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ವರದಿ ಸಲ್ಲಿಸಬೇಕು. ಆ ಬಳಿಕ ಪರ್ಯಾಯ ಜಾಗ ಅಧಿಕೃತಗೊಳಿಸುವ ಬಗ್ಗೆ ಪರಿಗಣಿಸಲಾಗುವುದು ಎಂದು ತಿಳಿಸಿ, ವಿಚಾರಣೆಯನ್ನು ಮಾ.30ಕ್ಕೆ ಮುಂದೂಡಿತು.
ಸ್ಥಳೀಯ ನಿವಾಸಿಗಳ ಸಂಘಟನೆ ಸ್ಟೋನ್ ಹಿಲ್ ಮೇಲೆ ನಗರಸಭೆ ಅನಧಿಕೃತವಾಗಿ ಮತ್ತು ಅವೈಜ್ಞಾನಿಕವಾಗಿ ತ್ಯಾಜ್ಯ ವಿಲೇವಾರಿ ಮಾಡುತ್ತಿದೆ ಎಂದು ಆರೋಪಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ಪೀಠ, ಅನಧಿಕೃತ ಹಾಗೂ ಅವೈಜ್ಞಾನಿಕವಾಗಿ ತ್ಯಾಜ್ಯ ವಿಲೇವಾರಿ ಮಾಡುತ್ತಿದ್ದುದನ್ನು ಗಮನಿಸಿತ್ತು. ಬಳಿಕ ತಪ್ಪೆಸಗಿದ ನಗರಸಭೆ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಸೂಚಿಸಿದ್ದ ಪೀಠ, ತ್ಯಾಜ್ಯ ವಿಲೇವಾರಿಗೆ ಪರ್ಯಾಯ ನಿವೇಶನ ಗುರುತಿಸುವಂತೆ ಸರ್ಕಾರ ಹಾಗೂ ನಗರಸಭೆಗೆ ನಿರ್ದೇಶಿಸಿತ್ತು. ಅದರಂತೆ ಇದೀಗ ಪರ್ಯಾಯ ನಿವೇಶನ ಗುರುತಿಸಿ ನಗರಸಭೆ ವರದಿ ಸಲ್ಲಿಸಿದೆ.