ಕೊಡಗು: ಸಂಜೆ ಸುರಿದ ಧಾರಾಕಾರ ಮಳೆ ಹಾಗೂ ಅವೈಜ್ಞಾನಿಕ ಒಳ ಚರಂಡಿ ನಿರ್ಮಾಣದಿಂದ ಸಡಿಲಗೊಂಡು ತಡೆಗೋಡೆ ಕುಸಿದ ಘಟನೆ ನಗರದ ಗೌಳಿಬೀದಿಯಲ್ಲಿ ರಾತ್ರಿ ನಡೆದಿದೆ.
ತಡೆಗೋಡೆ ಕುಸಿದ ಸಮೀಪ ಯಾವುದೇ ಮನೆಗಳು ಇಲ್ಲದೇ ಇದ್ದುದ್ದರಿಂದ ಯಾವುದೇ ಅನಾಹುತ ಸಂಭವಿಸಿಲ್ಲ. ನಗರದ ಆಕಾಶವಾಣಿ ಸಮೀಪ ಗೌಳಿಬೀದಿಯ ಕಂಚಿಕಾಮಾಕ್ಷಿ ದೇವಾಲಯದ ಸಮೀಪ ನಿವಾಸಿ ಸುರೇಶ್ ಎಂಬುವರ ಮನೆಯ ಹಿಂಬದಿಯ ತಡೆಗೋಡೆ ಸಂಜೆಯಿಂದ ಸುರಿಯುತ್ತಿರುವ ಮಳೆಗೆ ತೇವಾಂಶಗೊಂಡ ಗೋಡೆ ಏಕಾಏಕಿ ಕುಸಿದಿದೆ.
ಗೋಡೆ ಕುಸಿದ ಸ್ಥಳದಲ್ಲಿ ಪಾಳು ಬಿದ್ದ ಜಾಗ ಇದ್ದುದ್ದರಿಂದ ಅಪಾಯ ಸಂಭವಿಸಿಲ್ಲ. ಇನ್ನೂ ಸಂಜೆಯಿಂದ ಸುರಿಯುತ್ತಿರುವ ಮಳೆಗೆ ಒಂದು ಭಾಗದ ತಡೆಗೋಡೆ ಜಾರಿರುವುದಕ್ಕೆ ಸ್ಥಳೀಯರಲ್ಲಿ ಆತಂಕ ಹೆಚ್ಚಿದೆ.
ಘಟನಾ ಸ್ಥಳಕ್ಕೆ ಎನ್‌ಡಿಆರ್‌ಎಫ್ ತಂಡ, ನಗರ ಪೊಲೀಸ್ ಸಿಬ್ಬಂದಿ ಹಾಗೂ ಉಪವಿಭಾಗ ಅಧಿಕಾರಿ ಜವರೇಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ ತಡೆಗೋಡೆಗೆ ಹೊಂದಿಕೊಂಡಿರುವ 3 ಕುಟುಂಬಗಳನ್ನು ಮಳೆ ಜಿನುಗುತ್ತಿರುವುದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಮನವಿ ಮಾಡಿದ್ದಾರೆ. ಅಪಾಯದ ಸ್ಥಳದಲ್ಲಿ ಇರುವ ಕುಟುಂಬಸ್ಥರು ತಮ್ಮ ಸಂಬಂಧಿಕರ ಮನೆಗೆ ತೆರಳಿದ್ದಾರೆ.