ಕೊಡಗು: ಪ್ರಕೃತಿ ವಿಕೋಪ ಸಂಬಂಧಿಸಿದಂತೆ ದಾನಿಗಳು ಬಟ್ಟೆ, ಬರೆ, ಇತರ ವಸ್ತುಗಳನ್ನು ನೀಡುವುದು ಬೇಡ. ಬದಲಾಗಿ ಸಿಎಂ ಪರಿಹಾರ ನಿಧಿಗೆ ಕಳುಹಿಸಬಹುದು ಎಂದು ಸಚಿವ ವಿ.ಸೋಮಣ್ಣ ಮನವಿ ಮಾಡಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲೆಯ ಪ್ರಾಕೃತಿಕ ವಿಕೋಪಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, ಬೆಳೆ ಹಾನಿ ಪರಿಹಾರ ಸಂಬಂಧ ಸರ್ವೇ ಮಾಡಬೇಕು. ಕಾಫಿ, ಕರಿಮೆಣಸು ಮತ್ತು ಜಿಲ್ಲೆಯಲ್ಲಿ ಹಾನಿಗೊಳಗಾದ ಬೆಳೆಗಳ ಸಂಬಂಧ ಸರ್ವೆ ಆರಂಭಿಸಬೇಕು ಎಂದರು.
ಬಿಎಸ್‌ಎನ್‌ಎಲ್ ವತಿಯಿಂದ ಟವರ್‌ಗಳನ್ನು ಆರಂಭಿಸಿ. ಹಳ್ಳಿ ಪ್ರದೇಶದಲ್ಲಿ ನೆಟ್‌ವರ್ಕ್ ಸಮಸ್ಯೆ ಆಗದಂತೆ ಎಚ್ಚರ ವಹಿಸಬೇಕು. ಶೇ.40ರಷ್ಟು ಟವರ್‌ಗಳು ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಜಿಲ್ಲೆಯ 60 ಟವರ್‌ಗಳು ಸುಸ್ಥಿತಿಯಲ್ಲಿದ್ದು, ಹಾನಿಗೊಳಗಾದ ಮತ್ತು ತಾಂತ್ರಿಕ ಸಮಸ್ಯೆಯಿಂದ ಟವರ್‌ಗಳು ಕಾರ್ಯನಿರ್ವಹಿಸುತ್ತಿಲ್ಲ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಶೀಘ್ರದಲ್ಲೇ ಗಮನಹರಿಸುವಂತೆ ಸೂಚನೆ ನೀಡಿದರು.
ಹಾನಿಗೀಡಾದ ಸಂತ್ರಸ್ತರಿಗೆ ಪರಿಹಾರ ನೀಡಬೇಕು. ಸಂತ್ರಸ್ತರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಅಧಿಕಾರಿಗಳು ಕ್ರಮ ವಹಿಸಬೇಕು. ಕಳೆದ ಬಾರಿಯಂತೆ ಅವಶ್ಯಕ ವಸ್ತುಗಳು ಮತ್ತು ಆಹಾರದ ಕಿಟ್ ವಿತರಿಸಬೇಕು ಎಂದರು.
ಡ್ರೈನೇಜ್ ಕ್ಲೀನಿಂಗ್ ಸಂಬಂಧಿಸಿದಂತೆ ಮುಂಚಿತವಾಗಿ ಹಣ ಬಿಡುಗಡೆ ಮಾಡಿದ್ದೇವೆ. ನಿರೀಕ್ಷಿತ ಮಟ್ಟದಲ್ಲಿ ಕಾರ್ಯ ನಿರ್ವಹಿಸಿಲ್ಲ ಎಂಬ ದೂರುಗಳು ಕೇಳಿ ಬಂದಿವೆ. ಕೂಡಲೇ ಸ್ವಚ್ಛತೆ ಸಂಬಂಧ ಗಮನಹರಿಸಿ, ಜನರ ಆರೋಗ್ಯ ರಕ್ಷಣೆ ಬಗ್ಗೆ ಕ್ರಮ ವಹಿಸುವಂತೆ ಹೇಳಿದರು.
ಸಂಸದ ಪ್ರತಾಪ್ ಸಿಂಹ, ಜಿಲ್ಲಾಧಿಕಾರಿ ಅನೀಸ್ ಕೆ.ಜಾಯ್, ಶಾಸಕ ಅಪ್ಪಚ್ಚು ರಂಜನ್ ಇತರರು ಇದ್ದರು.